ಹುಬ್ಬಳ್ಳಿಯಲ್ಲಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಸಚಿವ ಪಿಯೂಷ್ ಗೋಯಲ್ ಚಾಲನೆ
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಯೋಗದಲ್ಲಿಂದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡಿರುವ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದ ನೂತನ ವಿಭಾಗೀಯ ಕೇಂದ್ರ ಕಚೇರಿಯ ಉದ್ಘಾಟನೆಯನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ವರ್ಚುವಲ್ ಮೂಲಕ ನೆರವೇರಿಸಿದರು.
ಹೌದು.. ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದ ನೂತನ ವಿಭಾಗೀಯ ಕೇಂದ್ರ ಕಚೇರಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಅಲ್ಲದೇ ಭಾರತೀಯ ಆಹಾರ ನಿಗಮವು ಬೆಂಗಳೂರಿನ ಪ್ರಾದೇಶಿಕ ಕಚೇರಿ ಸೇರಿದಂತೆ 5 ವಿಭಾಗೀಯ ಕಚೇರಿಗಳನ್ನು ಕರ್ನಾಟಕ ರಾಜ್ಯದಲ್ಲಿ ಹೊಂದಿದೆ. ಹುಬ್ಬಳ್ಳಿ, ರಾಯಚೂರು, ಶಿವಮೊಗ್ಗ, ಮೈಸೂರು, ಮಂಗಳೂರಿನಲ್ಲಿ ವಿಭಾಗೀಯ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ವರ್ಚುವಲ್ ಮೂಲಕ ಚಾಲನೆ ನೀಡಿದರು.
1971 ರಲ್ಲಿ ಭಾರತೀಯ ಆಹಾರ ನಿಗಮದ ವಿಭಾಗೀಯ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲಾಯಿತು. ಬಾಡಿಗೆ ಕಟ್ಟಡದಲ್ಲಿ ವಿಭಾಗೀಯ ಕಚೇರಿ ಕಾರ್ಯಾಚರಣೆ ನಡೆಸುತ್ತಿತ್ತು. ಹುಬ್ಬಳ್ಳಿ ಉಣಕಲ್ ಬಳಿ ಇರುವ ಭಾರತೀಯ ಆಹಾರ ನಿಗಮದ ಉಗ್ರಾಣಗಳ ಆವರಣದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ 1.8 ಕೋಟಿ ವೆಚ್ಚದಲ್ಲಿ 18 ಜೂನ್ 2020 ರಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಈಗ ನೂತನವಾಗಿ ಕಟ್ಟಡ ನಿರ್ಮಾಣಗೊಂಡಿದ್ದು, ಅಗತ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸ್ಥಳಾವಕಾಶ ಹೊಂದಿದೆ. ವಿದ್ಯುತ್ ಉಳಿತಾಯಕ್ಕೆ ಅನುಕೂಲವಾಗುವಂತೆ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯ, ರೆಕಾರ್ಡ್ ರೂಮ್, ಕ್ಯಾಂಟೀನ್, ಪವರ್ ಬ್ಯಾಕಪ್ ಸೌಲಭ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಆಡಿಟೋರಿಯಂ ಒಳಗೊಂಡಿದೆ.
ಹುಬ್ಬಳ್ಳಿಯ ವಿಭಾಗೀಯ ಕಚೇರಿ ಉತ್ತರ ಕರ್ನಾಟಕ ಭಾಗದ 7 ಕಂದಾಯ ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. 2.6 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣ ಜಾಲದ ಮೂಲಕ ಆಹಾರ ಪೂರೈಕೆಯನ್ನು ಮೇಲ್ವಿಚಾರಣೆ ನಿರ್ವಹಿಸುತ್ತಿದೆ. ರಾಜ್ಯದ ಶೇ.30 ರಷ್ಟು ಪಡಿತರ ಚೀಟಿದಾರರು ಮತ್ತು ಶೇ. 25 ರಷ್ಟು ಪಡಿತರ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುತ್ತಿದೆ.