“ಮೆಕ್ಕಾ”ದಲ್ಲಿ ಉಸಿರು ನಿಲ್ಲಿಸಿದ ನಾಗಲಾವಿ ಗುರುಗಳು!
ಧಾರವಾಡ
ಇಸ್ಲಾಂ ಧರ್ಮದ ಪವಿತ್ರ ಯಾತ್ರೆಗಳಲ್ಲೊಂದಾದ ಅರಬ್ ದೇಶದಲ್ಲಿನ ಮೆಕ್ಕಾಗೆ ಉಮ್ರಾ ನಿಮಿತ್ತ ತೆರಳಿದ್ದ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ವರವ ನಾಗಲಾವಿ ಗ್ರಾಮದ ಧರ್ಮ ಗುರುಗಳು ಹಾಗೂ ಹಜರತ್ ಸಯ್ಯದ್ ದಾದಾಪೀರ ಪೀರಜಾದೆ (ಖಾದ್ರಿ) ದರ್ಗಾದ ವಂಶಸ್ಥರು ಆದ ಸಯ್ಯದ್ ಪೀರಜಾದೆ (78)ರವರು ಹೃದಯಾಘಾತದಿಂದ ಅಸುನಿಗಿದ್ದು, ಕುಟುಂಬಸ್ಥರು, ಸಂಬಂಧಿಕರು ಹಾಗೂ ಅಪಾರ ಭಕ್ತರು ಅಘಾತಗೊಂಡಿದ್ದಾರೆ.
ಹುಬ್ಬಳ್ಳಿಯಿಂದ 8/10/2022ರಂದು ಸಯ್ಯದ್ ಪೀರಜಾದೆಯವರು ಪತ್ನಿ, ಮಗ ಹಾಗೂ ಮೊಮ್ಮಕ್ಕಳು ಜೊತೆಗೆ ಉಮ್ರಾ ಯಾತ್ರೆ ಆರಂಭಿಸಿದ್ದರು.
ಇವರು ಉಮ್ರಾ ಮುಗಿಸಿಕೊಂಡು ಇದೆ 25/10/2022ರಂದು ಮರಳಿ ಬರಬೇಕಿತ್ತು. ಆದರೆ ಅಲ್ಲಾಹನ ಕರೆ ಬಿಡಲಿಲ್ಲ.
ನಾಡಿ ಭವಿಷ್ಯ ನುಡಿಯುತ್ತಿದ್ದ ಗುರುಗಳು ನೊಂದು ಬರುವ ಅನೇಕ ಭಕ್ತ ಜನರ ಸಂಕಷ್ಟ, ಸಮಸ್ಯೆಗಳನ್ನು ದೂರಮಾಡುತ್ತಿದ್ದರು. ವರವ ನಾಗಲಾವಿಯಲ್ಲಿ ಸರ್ವ ಧರ್ಮೀಯರಿಗೂ ಮಾರ್ಗ ದರ್ಶಕರಾಗಿದ್ದಲ್ಲದೆ, ಇಲ್ಲಿ ತಮ್ಮ ಪೂರ್ವಜರ ಕಾಲದಿಂದಲೂ ವರ್ಷಕ್ಕೊಮ್ಮೆ ಹೊಳಿಹುಣ್ಣಿಮೆಯ ಬಳಿಕ ದರ್ಗಾದ ಉರುಸು(ಜಾತ್ರೆ)ಅತ್ಯಂತ ಸಂಭ್ರಮ ಸಡಗರದಿಂದ ನಡೆಯುತ್ತದೆ.
ಜಾತಿ ಭೇದ ತೊರದ ಅವರಲ್ಲಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಸಹ ಹಜರತ್ ಸಯ್ಯದ್ ಪೀರಜಾದೆಯವರ ಬಳಿ ತಮ್ಮ ಕುಂದು ಕೊರತೆಗಳನ್ನು ತಿಳಿಸಿ ಆಶೀರ್ವಾದ ಪಡೆಯುತ್ತಿದ್ದರು.
ಆದರೆ ಉಮ್ರಾ ಯಾತ್ರೆಗೆ ತೆರಳುವ ಮೊದಲೇ ಎಲ್ಲ ಭಕ್ತರನ್ನೂ ಒಗ್ಗೂಡಿಸಿ ಪ್ರೀತಿಯಿಂದ ಔತಣಕೂಟ ಏರ್ಪಡಿಸಿ ಎಲ್ಲ ಭಕ್ತರನ್ನು ಮಾತನಾಡಿಸಿ ಮುಗುಳ್ನಗುತ್ತಲೆ ಅನೇಕ ವಿಚಾರಗಳನ್ನು ಹಂಚಿಕೊಂಡು ಭಕ್ತರಿಗೆ ಅಂತಿಮ ವಿದಾಯ ಹೇಳಿದ್ದರು.
ಆದರೆ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರದೆ ಮೆಕ್ಕಾದಲ್ಲಿಯೆ ಅಂತ್ಯಕ್ರಿಯೆ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ ಎನ್ನಲಾಗಿದೆ.