ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು
ಬೆಳಗಾವಿ
ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮಾರ್ಧನಿಸಿದ್ದು, ಕೊಲೆ ಆರೋಪಿಯೊಬ್ಬ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಘಟನೆ ಇಂದು ಬೆಳಗಿನ ಜಾವ ಧರ್ಮನಾಥ ಭವನ ಸಮೀಪ ನಡೆದಿದೆ.
ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ವಿಶಾಲಸಿಂಗ್ ವಿಜಯಸಿಂಗ್ ಚವ್ಹಾಣ್ (25) ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದಾನೆ. ತಕ್ಷಣ ಎಸಿಪಿ ನಾರಾಯಣ ಭರಮನಿ ಆತನ ಕಾಲಿಗೆ ಗುಂಡು ಹಾರಿಸುವ ಮೂಲಕ ಆತನನ್ನು ಹೆಡೆಮುರಿಕಟ್ಟಿದ್ದಾರೆ.
ಭವಾನಿ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ (40) ಎಂಬುವವರನ್ನು ಮಾರ್ಚ್ 15ರಂದು ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ರಾಜು ಮೂರು ವಿವಾಹವಾಗಿದ್ದ. ಪತಿ ಹತ್ಯೆಗೆ ಎರಡನೇ ಪತ್ನಿ ಕಿರಣ ವಿಶಾಲಸಿಂಗ್ ಗೆ ಸುಪಾರಿ ನೀಡಿದ್ದಳು. ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಮಾತ್ರವಲ್ಲ ಇನ್ನೂ ಕೆಲವು ಕೊಲೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಿಶಾಲಸಿಂಗ್ ಭಾಗಿಯಾಗಿದ್ದ.
ಬೆಳಗಾವಿ ಖಡೇಬಜಾರ್, ಶಹಾಪುರ,ಟಿಳಕವಾಡಿ, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಹಾರಾಷ್ಟ್ರದ ಹಲವು ಪೊಲೀಸ್ ಠಾಣೆಗಳಲ್ಲಿಯೂ ಈತನ ವಿರುದ್ಧ ಕೇಸ್ ದಾಖಲಾಗಿವೆ.
ಇದೀಗ ಬಂಧಿತ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಕಾನೂನು ವಿಭಾಗದ ಡಿಸಿಪಿ ರವೀಂದ್ರ ಗಡಾದಿ ತಂಡ ಆರೋಪಿ ಮೇಲೆ ಫೈರಿಂಗ್ ಮಾಡಿ ಬಂಧಿಸಿದೆ.