ಬಿಲ್ಡರಗೆ 11 ಲಕ್ಷದ 8 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ಕೊಡಲುಗ್ರಾಹಕರ ಆಯೋಗದಿಂದ ಆದೇಶ
ಧಾರವಾಡ
ಹಳೆ ಹುಬ್ಬಳ್ಳಿಯ ಹತ್ತಿರದ ಮಗಜಿಕೊಂಡಿ ನಿವಾಸಿ ಡಾ: ಗೀತಾ ಜೋಡಂಗಿ ಎಂಬುವವರು ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ಸ್ ಹಾಗೂ ಡೆವಲಪರ್ಸ್‍ರವರಿಂದ ಗಾಮನಗಟ್ಟಿ ಗ್ರಾಮದಲ್ಲಿ ನೂತನವಾಗಿ ಅಭಿವೃದ್ಧಿಪಡಿಸುತ್ತಿರುವ ಗಾಮನಗಟ್ಟಿ ಲೇಔಟ್‍ನಲ್ಲಿ 11 ಲಕ್ಷ 49 ಸಾವಿರದ 885 ರೂಪಾಯಿಗಳಿಗೆ ಪ್ಲಾಟ ನಂ.65ನ್ನು ಖರೀದಿಸಿದ್ದರು.
ಈ ಬಗ್ಗೆ ಉಭಯತರ ಮಧ್ಯ ಖರೀದಿ ಒಪ್ಪಂದ ಪತ್ರ ಆಗಿತ್ತು. ಖರೀದಿದಾರರು ಒಟ್ಟು ರೂ.11 ಲಕ್ಷ 8 ಸಾವಿರದ 80 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದರು.
ನಿತ್ಯವೂ ಪ್ರಥ್ವಿ ಡೆವಲಪರ್ ಕಚೇರಿಗೆ ಅಲೆದಾಡಿ ಸೈಟ್ ಪಡೆದಿದ್ದ ಗೀತಾ ಅವರು ಹೈರಾಣಾಗಿ ಹೋಗಿದ್ದರು.
ಆದರೆ ಡೆವಲಪರ್ಸ್‍ರವರು ಖರೀದಿ ಕರಾರು ಒಪ್ಪಂದದಂತೆ ನಿವೇಶನಗಳನ್ನು ಅಭಿವೃಧ್ದಿಪಡಿಸುವಲ್ಲಿ ವಿಫಲರಾಗಿದ್ದು ಮತ್ತು ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ.
ಒಂದಿಲ್ಲೊಂದು ನೆಪ ಹೇಳಿ ಖರೀದಿ ಪತ್ರ ಬರೆದುಕೊಡದೇ ಬಿಲ್ಡರ್ ಸತಾಯಿಸಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ದೂರುದಾರ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರವರು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ದೂರುದಾರನಿಗೆ ನಿವೇಶನ ಅಭಿವೃದ್ದಿಪಡಿಸಿ ಖರೀದಿ ಪತ್ರ ನೋಂದಣಿ ಮಾಡಿಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಅದಕ್ಕಾಗಿ ದೂರುದಾರರಿಂದ ಪಡೆದ ರೂ.11 ಲಕ್ಷದ 8ಸಾವಿರದ 80 ರೂಪಾಯಿಗಳ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ಆದ 2 ತಿಂಗಳ ಒಳಗಾಗಿ ಹಣ ಸಂದಾಯ ಮಾಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ.50,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.