ಬಳ್ಳಾರಿ ಮಹಾನಗರ ಪಾಲಿಕೆಗೆ ರಾಜ್ಯದ ಅತಿ ಕಿರಿಯ ಮೇಯರ್ ಆಯ್ಕೆ
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಕಾಂಗ್ರೆಸ್ನ ಡಿ. ತ್ರಿವೇಣಿ ಆಯ್ಕೆಯಾದರು. ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ 23 ವರ್ಷದ ತ್ರಿವೇಣಿ ಪಾತ್ರರಾಗಿದ್ದಾರೆ.
ಉಪ ಮೇಯರ್ ಆಗಿ ಕಾಂಗ್ರೆಸ್ನ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದರು.ಮೇಯರ್ ಆಯ್ಕೆಗಾಗಿ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು, ತ್ರಿವೇಣಿಗೆ 28 ಮತಗಳು ಬಿದ್ದರೆ, ಬಿಜೆಪಿಯ ನಾಗರತ್ನಮ್ಮ ಅವರಿಗೆ 16 ಮತಗಳು ಚಲಾವಣೆಯಾಗಿವೆ. ಉಪ ಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಬಿ.ಜಾನಕಿ ಅವರ ಆಯ್ಕೆ ಅವಿರೋಧವಾಯಿತು.
ನಾಲ್ಕನೇ ವಾರ್ಡ್ ನಿಂದ ಪಾಲಿಕೆ ಸದಸ್ಯೆಯಾಗಿ ತ್ರಿವೇಣಿ ಆಯ್ಕೆಯಾಗಿದ್ದರೆ, 33 ನೇ ವಾರ್ಡಿನಿಂದ ಬಿ.ಜಾನಕಿ ಆಯ್ಕೆಯಾಗಿದ್ದಾರೆ.ಪಾಲಿಕೆಯ ಒಟ್ಟು 39 ವಾರ್ಡ್ ಗಳ ಪೈಕಿ ಐದು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 26 ಸದಸ್ಯರಿದ್ದಾರೆ. ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನದ ಹಕ್ಕಿದೆ.ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ನಿಗದಿಯಾಗಿತ್ತು.