ಸ್ಥಳೀಯ ಸುದ್ದಿ
ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಗೆ AIDSO-ವಿರೋಧ
ಧಾರವಾಡ
ಧಾರವಾಡ ದ್ವಿತೀಯ ಪಿಯುಸಿ ಮದ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವ ಹಠಾತ್ ಹೇರಿಕೆ ಹಿಂಪಡೆಯಲು ಆಗ್ರಹಿಸಿ ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ಅಖಿಲ ಕರ್ನಾಟಕ ಪ್ರತಿಭಟನೆ ದಿನಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಐಡಿಎಸ್ಓ ದಾರವಾಡ ಜಿಲ್ಲಾ ಸಮಿತಿಯ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯು, ದ್ವಿತೀಯ ಪಿಯು ಮದ್ಯ ವಾರ್ಷಿಕ ಪರೀಕ್ಷೆ-೨೦೨೧ರ ಮರು ವಿನ್ಯಾಸದ ಕುರಿತು ಸುತ್ತೋಲೆ ಹೊರಡಿಸಿದೆ. ಆ ಸುತ್ತೋಲೆಯ ಪ್ರಕಾರ, ಈಗ ನಡೆಯುವ ಮದ್ಯವಾರ್ಷಿಕ ಪರೀಕ್ಷೆಯನ್ನು ರಾಜ್ಯ ಬೋರ್ಡ್ ಪರೀಕ್ಷೆಯಾಗಿ ನಡೆಸಲಾಗುವುದು. ಅಂದರೆ, ಪ್ರಶ್ನೆಪತ್ರಿಕೆಗಳು ಕೇಂದ್ರ ಕಛೇರಿಯಿಂದ ಬರುತ್ತದೆ. ೨೯ ನವೆಂಬರ್‌ನಿಂದ ಪರೀಕ್ಷೆ ನಡೆಯಲಿದೆ. ಅಂದರೆ, ಕೇವಲ ೧೫ ದಿನಗಳಲ್ಲಿ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಏಕಾಏಕಿ, ಯಾವುದೇ ಪೂರ್ವ ಸೂಚನೆ ಇಲ್ಲದೇ, ಪೂರ್ವ ತಯಾರಿ ಇಲ್ಲದೇ ಬೋರ್ಡ್ ಪರೀಕ್ಷೆಯೊಂದನ್ನು ಎದುರಿಸಲು ಸಿದ್ಧರಾಗಬೇಕು!! ರಾಜ್ಯ ಸರ್ಕಾರದ ಈ ನಡೆ ಅತ್ಯಂತ ಅವೈಜ್ಞಾನಿಕವಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗು ಉಪನ್ಯಾಸಕರು ಅತ್ಯಂತ ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಪ್ರಸ್ತುತ ದ್ವಿತೀಯ ಪಿಯುಸಿ ಬ್ಯಾಚ್ ತಮ್ಮ ಮೊದಲ ಪಿಯು ಪರೀಕ್ಷೆಗಳನ್ನು ಬರೆಯದೆ ಬಡ್ತಿ ಹೊಂದಿದ್ದಾರೆ. ಎರಡು ವರ್ಷಗಳು ಪರೀಕ್ಷೆಗಳನ್ನು ಬರೆಯಲು ಆಗದೆ, ಬರವಣಿಗೆ ಅಭ್ಯಾಸ ಇರದೆ ಪ್ರಸ್ತುತ ಎರಡನೇ ಪಿಯುಸಿಗೆ ತೇರ್ಗಡೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಕಲಿಕಾ ಪ್ರಕ್ರಿಯೆ ಹಾಗು ಕಲಿಕಾ ವಿಧಾನ ಸ್ವಲ್ಪ ಮಟ್ಟಿಗೆ ನಿಧಾನವಾಗಿದೆ ಮತ್ತು ಪರೀಕ್ಷೆಗೆ ಸಜ್ಜಾಗಲು ಹೆಚ್ಚಿನ ಸಮಯದ ಅಗತ್ಯ ಈ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಇದೆ. ದ್ವಿತೀಯ ಪಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ, ಮೇ ೩ನೇ ವಾರ ತರಗತಿಗಳು ಆರಂಭವಾಗಿ, ಮಾರ್ಚ್ ೩ನೆ ವಾರಕ್ಕೆ ಅಂತಿಮ ಪರೀಕ್ಷೆಗಳು ನಡೆಯುತ್ತದೆ. ಈಗ ಕೋವಿಡ್ ಹಿನ್ನೆಲೆಯಲ್ಲಿ, ತರಗತಿಗಳು ಆರಂಭವಾಗಿದ್ದೇ ಆಗಸ್ಟ್ ೩ನೇ ವಾರಕ್ಕೆ. ಏಪ್ರಿಲ್‌ಗೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. ಅಂದರೆ ಕಾಲೇಜು ಪುನರಾರಂಭ ಮೂರು ತಿಂಗಳು ವಿಳಂಬವಾಗಿದೆ. ಇದರಿಂದ ತಯಾರಿ ಸಮಯ, ಪಾಠದ ಸಮಯ ಎಲ್ಲವೂ ಕುಗ್ಗಿದೆ. ಹೀಗಾಗಿ ರಾಜ್ಯದ ಹಲವು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ, ಪರೀಕ್ಷೆಗೆ ಸಮರ್ಪಕವಾದ ತಯಾರಿ ನಡೆಸಲು ಸಾಧ್ಯವಾಗಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರದ ಮದ್ಯ ವಾರ್ಷಿಕವು ಬೋರ್ಡ್ ಪರೀಕ್ಷೆ ರೀತಿ ನಡೆಯುತ್ತದೆ ಎಂಬ ಹಠಾತ್ ನಿರ್ಧಾರವು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರಲ್ಲಿ ಅತೀವ ಆತಂಕ ಸೃಷ್ಟಿಸಿದೆ. ಈ ಹಠಾತ್ ಹೇರಿಕೆಯು ಆತಂಕ, ದುಗುಡ ಹಾಗೂ ಖಿನ್ನತೆಯನ್ನು ಸೃಷ್ಟಿಸಿ, ಮಾನಸಿಕ ಒತ್ತಡವನ್ನು ಹೇರಿದೆ. ಸಿಬಿಎಸ್‌ಇ ಅಥವಾ ಐಸಿಎಸ್‌ಸಿ ಮಂಡಳಿಗಳು, ಶೈಕ್ಷಣಿಕ ವರ್ಷ ಆರಂಭವಾಗುವ ಸಮಯದಲ್ಲೇ, ಪರೀಕ್ಷೆ/ ಮೌಲ್ಯಮಾಪನದಲ್ಲಿ ಅಳವಡಿಸಿಕೊಳ್ಳುವ ಬದಲಾವಣೆಗಳ ಕುರಿತು ಮುನ್ಸೂಚನೆ ನೀಡಿದ್ದರು. ಆದರೆ, ಪಿಯುಸಿ ಮಂಡಳಿ ಅಂತಹ ಯಾವುದೇ ನಿರ್ಣಯದ ಬಗ್ಗೆ ವರ್ಷ ಆರಂಭವಾಗುವಾಗ ಹೇಳದೆ ಈಗ ಹಠಾತ್ ಬದಲಾವಣೆ ಮಾಡುತ್ತೇವೆ ಎನ್ನುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗುತ್ತದೆ. ಈ ಹಠಾತ್ ಬದಲಾವಣೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರ ಅಭಿಪ್ರಾಯ. ಹಾಗಾಗಿ, ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯ, ಮಾನಸಿಕ ಆರೋಗ್ಯ ಹಾಗೂ ಪೋಷಕರು, ಉಪನ್ಯಾಸಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಯಥಾಪ್ರಕಾರ ಪ್ರತಿ ವರ್ಷದಂತೆ ಅಂತಿಮ ಪರೀಕ್ಷೆಯನ್ನು ಮಾತ್ರ ಪಬ್ಲಿಕ್ ಪರೀಕ್ಷೆಯಾಗಿ ಮಾಡಿ, ಮದ್ಯ ವಾರ್ಷಿಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ, ವಿಕೇಂದ್ರೀಕೃತ ಪ್ರಕ್ರಿಯೆಯಲ್ಲಿ ನಡೆಸಬೇಕು ಎಂದು ಎಐಡಿಎಸ್‌ಓ ದಾರವಾಡ ಜಿಲ್ಲಾ ಸಮಿತಿ ಆಗ್ರಹಿಸಿದೆ.