ಜೀ ಮೀಡಿಯಾ ಉದ್ಘಾಟನೆ
ಬೆಂಗಳೂರು
ದೇಶಾದ್ಯಂತ ಮನೆ ಮಾತಾಗಿರುವ ಜೀ ಮೀಡಿಯಾ ಸಂಸ್ಥೆ, ಸುದ್ದಿ ಜಗತ್ತಿನಲ್ಲಿ ಹೊಸ ಹೊಸ ಪ್ರಯೋಗಗಳು, ವಿಭಿನ್ನ ಮತ್ತು ವಿಶೇಷ ವಸ್ತುನಿಷ್ಠ ಕಾರ್ಯಕ್ರಮಗಳ ಮೂಲಕ ಜನರ ನಂಬಿಕೆಗೆ ಪಾತ್ರವಾಗಿದೆ.
ಉತ್ತರ ಭಾರತದಲ್ಲಿ ತನ್ನ ಛಾಪುನ್ನು ಮೂಡಿಸಿರುವ ಜೀ ಮೀಡಿಯಾ, ಈಗ ದಕ್ಷಿಣ ಭಾರತದಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಜೀ ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮ ಆರಂಭವಾಗಿ ಒಂದು ವರ್ಷ ಕಳೆದಿದ್ದು, ಈಗ ಸ್ಯಾಟಲೈಟ್ ಚಾನೆಲ್ ಲೋಕಾರ್ಪಣೆಯಾಗಿ ಎಲ್ಲರ ಮನೆಮನಗಳಿಗೆ ಬರುತ್ತಿದೆ.
ಸತ್ಯವೇ ಸುದ್ದಿಯ ಜೀವಾಳ ಎಂಬ ಧ್ಯೇಯದೊಂದಿಗೆ ಜೀ ಕನ್ನಡ ನ್ಯೂಸ್ ಕನ್ನಡಿಗರ ವಿಶ್ವಾಸ ಗಳಿಸಿದೆ. ಜೀ ಮೀಡಿಯಾ ನಿಖರವಾದ ಸುದ್ದಿ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ನೆಟ್ ವರ್ಕ್. ನಿಖರವಾದ ಸುದ್ದಿ ನೀಡುವುದು ಮಾತ್ರವಲ್ಲ, ನಿಷ್ಪಕ್ಷಪಾತವಾದ ಸುದ್ದಿ ನೀಡುವುದರಲ್ಲೂ ಸದಾ ಮುಂದಿರುವ ಮಾಧ್ಯಮ ಸಂಸ್ಥೆ ಜೀ ಮೀಡಿಯಾ. ಜೊತೆಗೆ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಟ್ ವರ್ಕ್ ಕೂಡ ಹೌದು.
ಜೀ ಮೀಡಿಯಾ ದೇಶದ ವಿವಿಧ ಭಾಷೆಗಳಲ್ಲಿ ಒಟ್ಟು 18ಕ್ಕೂ ಹೆಚ್ಚು ಸುದ್ದಿ ವಾಹಿನಿಗಳನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಆರಂಭವಾಗಿ ವರ್ಷ ಕಳೆದಿದೆ. ಒಂದೇ ವರ್ಷದಲ್ಲಿ ಜೀ ಕನ್ನಡ ನ್ಯೂಸ್ ಜನರ ಮನೆ ಮನದಲ್ಲೂ ಬೇರೂರಿದೆ.
ರಾಜ್ಯಾದ್ಯಂತ ಭಾರೀ ನಿರೀಕ್ಷೆ ಮೂಡಿಸಿರುವ ಜೀ ಕನ್ನಡ ನ್ಯೂಸ್ ಚಾನೆಲ್ ಸೋಮವಾರ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು.
ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಚಾನೆಲ್ ಲೋಕಾರ್ಪಣೆ ಮಾಡಿದ್ರು. ಇಷ್ಟು ದಿನ ಡಿಜಿಟಲ್ ಮಾಧ್ಯಮದಲ್ಲಿದ್ದ ಜೀ ಕನ್ನಡ ನ್ಯೂಸ್ ಈಗ ಟಿವಿಯಲ್ಲೂ ಪ್ರಸಾರವಾಗಲಿದೆ.
ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರಾದ ಅಭಿಷೇಕ್ ಅಂಬರೀಶ್, ಅನಿರುದ್ಧ್ ವಿಷ್ಣುವರ್ಧನ್, ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಗೌರವ್ ಭಾಟಿಯಾ, ಡಿಸಿಪಿ ಡಾ. ಭೀಮಾಶಂಕರ್ ಎಸ್. ಗುಳೇದ್, ನಿವೃತ್ತ ಡಿಸಿಪಿ ಬಸವರಾಜ ಮಾಲಗತ್ತಿ, ಜ್ಯೋತಿಷಿಗಳಾದ ಡಾ. ದಿನೇಶ್ ಗುರೂಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಜೀ ಕನ್ನಡ ನ್ಯೂಸ್ ಚಾನೆಲ್‌ಗೆ ಶುಭ ಕೋರಿದ್ರು. ಈ ಸಂದರ್ಭದಲ್ಲಿ ಜೀ ಮೀಡಿಯಾ ಸಿಇಒ ಅಭಯ್ ಓಜಾ, ಸಿಆರ್‌ಒ ಮೋನಾ ಜೈನ್, ಜೀ ಕನ್ನಡ ನ್ಯೂಸ್ ಪ್ರಧಾನ ಸಂಪಾದಕ ರವಿ ಎಸ್ ಹಾಗೂ ಕಚೇರಿ ಸಿಬ್ಬಂದಿ ಇದ್ದರು.
ಧನ್ಯವಾದಗಳು
ರವಿ ಎಸ್
ಪ್ರಧಾನ ಸಂಪಾದಕ
ಜೀ ಕನ್ನಡ ನ್ಯೂಸ್