POWER CITY NEWS : ಸಂಘರ್ಷಮಯ ವರ್ತಮಾನಕ್ಕೆ ಭಾರತದ ಆಧ್ಯಾತ್ಮ ಸಂಜೀವಿನಿ-ಉಪರಾಷ್ಟ್ರಪತಿ!
hubballi:ಹುಬ್ಬಳ್ಳಿ: ಜಗತ್ತಿನ ವರ್ತಮಾನದ ಸಂಘರ್ಷಮಯ ಪರಿಸ್ಥಿತಿ ಉಪಶಮನಕ್ಕೆ ಭಾರತದ ಪಾರಂಪರಿಕ ಆಧ್ಯಾತ್ಮ ವಿದ್ಯೆಯು ಸಂಜೀವಿನಿಯಾಗಬಲ್ಲದು ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಇಂದಿಲ್ಲಿ ಪ್ರತಿಪಾದಿಸಿದರು.
ಸಮೀಪದ ವರೂರು ಗ್ರಾಮದ ನವಗ್ರಹ ಜೈನ ತೀರ್ಥಕ್ಷೇತ್ರದಲ್ಲಿ ಪ್ರಪಂಚದಲ್ಲೇ ಎತ್ತರವಾದ ೪೦೫ ಅಡಿ ಸುಮೇರು ಪರ್ವತ ಲೋಕಾರ್ಪಣೆ ಮಾಡಿ, ಜಿನಬಿಂಬ ಪಂಚಕಲ್ಯಾಣ ಮಹೋತ್ಸವ ಉದ್ಘಾಟನೆ ಮತ್ತು ಜೈನ ತೀರ್ಥಂಕರರ ಮಹಾಮಸ್ತಕಾಭಿಷೇಕ ನೆರವೇರಿಸಿ ಮಾತನಾಡಿದ ಅವರು ಅಹಿಂಸಾ ತತ್ವವು ಗೊಂದಲಮಯವಾಗಿರುವ ಮಾನವ ಜೀನವಕ್ಕೆ ಕಲ್ಯಾಣವನ್ನೂ, ಶಾಂತಿ ಸಮಾಧಾನಗಳನ್ನೂ ನೀಡುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
೧೨ ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಸುಮೇರು ಪರ್ವತಗಳು ಭಾರತದ ಪುರಾತನ ಜ್ಞಾನ ಹಾಗೂ ಆಧುನಿಕ ವಿಜ್ಞಾನಗಳು ಒಟ್ಟಿಗೇ ಇರಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿದೆ. ನಮ್ಮ ಮಠ, ಮಂದಿರಗಳು ಕೇವಲ ಕಟ್ಟಡಗಳಲ್ಲ. ಅವು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಿವೆ ಅಲ್ಲದೇ ಆಧುನಿಕತೆ ಮತ್ತು ಪರಂಪರೆಯ ಕೊಂಡಿಗಳಾಗಿವೆ ಎಂದರು.
ಭೌತಿಕ ಉನ್ನತಿಯ ಜೊತೆ ಆಧುನಿಕ ತಂತ್ರಜ್ಞಾನಗಳು ಸೇರಿ ಭಾರತವನ್ನು ೨೦೪೭ ರ ಹೊತ್ತಿಗೆ ಜಗತ್ತಿನಲ್ಲಿ ಒಂದು ಪ್ರಮುಖ ವಿಕಾಸಶೀಲ ದೇಶವನ್ನಾಗಿ ಪರಿವರ್ತಿಸಲಿವೆ. ಇವೆರಡೂ ಮಾನವನ ಕಲ್ಯಾಣವನ್ನು ಎತ್ತಿಹಿಡಿಯಲಿವೆ. ಎಂಥದೇ ಪರಿಸ್ಥಿತಿ ಬರಲಿ, ಕತ್ತಲೆಯ ಸುರಂಗದ ಕೊನೆಗೆ ಬೆಳಕು ಕಾಣಲಿದೆ. ಅದುವೇ ಭಾರತದ ಅಧ್ಯಾತ್ಮ ಹಾಗೂ ವಸುದೈವ ಕುಟುಂಬಕಮ್ ಎಂಬ ವಿಶ್ವಭಾತೃತ್ವ ಭಾವನೆ ಎಂದರು.
ಐದು ಸಾವಿರ ವರ್ಷಗಳಿಗೂ ಹಿಂದಿನ ನಮ್ಮ ನಾಗರಿಕತೆಯು ಅನೇಕ ಕ್ರೌರ್ಯ ಮತ್ತು ಆಕ್ರಮಣಗಳಿಗೆ ಒಳಗಾದರೂ ಕೂಡ ನಾವು ಅದನ್ನು ಉಳಿಸಿಕೊಂಡಿದ್ದೇವೆ ಅಷ್ಟೇ ಅಲ್ಲದೇ ಬೆಳೆಸಿದ್ದೇವೆ. ಇಂದೂ ಅದು ಜೀವಂತವಾಗಿದೆ. ಸಂವಾದ ಎಂಬುದು ಅದರ ತಿರುಳಾಗಿದೆ. ಇನ್ನೊಬ್ಬರ ಅಭಿಪ್ರಾಯಕ್ಕೂ ಬೆಲೆಕೊಡುವುದನ್ನು ಅದು ತಿಳಿಸುತ್ತದೆ ಎಂದ ಉಪರಾಷ್ಟ್ರಪತಿ ಇದುವೇ ಪ್ರಸ್ತುತ ಜಗತ್ತಿನ ಬಿಕ್ಕಟ್ಟು ಮತ್ತು ಸವಾಲುಗಳಿಗೆ ಉತ್ತರವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮಾತನಾಡಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯ ಜೊತೆಗೆ ಆರೋಗ್ಯ ಮತ್ತು ಚಿಕಿತ್ಸೆಯ ಕ್ಷೇತ್ರದಲ್ಲೂ ಆಚಾರ್ಯ ಗುಣಧರನಂದಿ ಮಹಾರಾಜರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು, ಜೈನ ಧರ್ಮದಲ್ಲಿ ಅಹಿಂಸೆಗೆ ಪ್ರಾಮುಖ್ಯತೆಯಿದೆ. ಅದನ್ನು ನಾವೆಲ್ಲರೂ ಪಾಲಿಸಿ ವಿಶ್ವಶಾಂತಿಗೆ ನಮ್ಮದೇ ಆದ ಕೊಡುಗೆ ಕೊಡೋಣ ಎಂದರು.
ಇನ್ನೋರ್ವ ಅತಿಥಿ ಕೇಂದ್ರ ಆಹಾರ ಖಾತೆ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ನವಗ್ರಹ ತೀರ್ಥಕ್ಷೇತ್ರವನ್ನೂ, ಆಚಾರ್ಯ ಗುಣಧರ ನಂದಿ ಮಹಾರಾಜರನ್ನೂ ತಾವು ಮೊದಲಿನಿಂದಲೂ ನೋಡುತ್ತ ಬಂದಿರುವುದಾಗಿಯೂ ಈ ೨೦ ವರ್ಷಗಳಲ್ಲಿ ಅವರು ತಮ್ಮ ಸಂಕಲ್ಪ ಶಕ್ತಿಯಿಂದ ೧೩ ಕಾಲೇಜುಗಳನ್ನೂ, ಆಸ್ಪತ್ರೆಯನ್ನೂ ಕಟ್ಟಿದ್ದಾರೆ. ನವಗ್ರಹ ತೀರ್ಥ ಕ್ಷೇತ್ರವನ್ನು ರಾಜ್ಯದ ಒಂದು ಧಾರ್ಮಿಕ ಪ್ರವಾಸ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಆಚಾರ್ಯ ಗುಣಧರ ನಂದಿ ಮಹಾರಾಜರು ಕ್ಷೇತ್ರದಲ್ಲಿ ಸುಮೇರು ಪರ್ವತ ನಿರ್ಮಿಸಬೇಕೆಂಬ ತಮ್ಮ ಕನಸು ಇಂದು ನನಸಾಗಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. ರಾಜಸ್ಥಾನದ ಜೈನ ಆಚಾರ್ಯ ಗುರುದೇವ ಕುಂತುಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಎಸ್‌ಡಿಎಂದ ಜೈನಮಠ ಟ್ರಸ್ಟಿನ ಅಧ್ಯಕ್ಷ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಅತಿಥಿಗಳನ್ನು ಸನ್ಮಾನಿಸಿದರು. ಸೌಧರ್ಮ ಇಂದ್ರ ಉಪಸ್ಥಿತರಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ, ಮಹಾಮಸ್ತಕಾಭಿಷೇಕ ಸಮಿತಿ ಗೌರವಾಧ್ಯಕ್ಷ ಡಾ,ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಅಶ್ವಿನಿ ಪುಟ್ಟಣವರ ಹಾಗೂ ಕುಮುದಾ ಜೈನ ನಿರೂಪಿಸಿದರು.
ಮುಂಜಾನೆ ನವಗ್ರಹ ತೀರ್ಥಂಕರರ ಮೆರವಣಿಗೆ ವಾದ್ಯಮೇಳಗಳೊಂದಿಗೆ ನಡೆಯಿತು. ಮಧ್ಯಾಹ್ನ ಆಚಾರ್ಯರಿಂದ ನವಗ್ರಹ ಶಾಂತಿ ಹವನ, ಮಹಾಮಂಗಳಾರತಿ ಪೂಜಾ ವಿಧಾನ, ಅಷ್ಟಕುಮಾರಿಕೆಯರಿಂದ ಸೇವೆ ಮತ್ತು ಪೂಜೆ, ಸಂಜೆ ಗರ್ಭಕಲ್ಯಾಣ ಕಾರ್ಯಕ್ರಮಗಳು ನೆರವೇರಿದವು.