POWER CITYNEWS : BANGALORE/HUBLI
ಬೆಂಗಳೂರು : ದೇಶದ ಮೆಚ್ಚುಗೆಗೆ ಸದಾ ಸುದ್ದಿಯಾಗೋ ಕರ್ನಾಟಕ ಪೋಲೀಸರ ಕಾರ್ಯ ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ಹೌದು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯಾ ಜಸ್ಟೀಸ್ ರಿಪೋರ್ಟ್ ನವರು ನಡೆಸಿದ ಸಮೀಕ್ಷಾ ವರದಿಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice delivery) ಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಒಟ್ಟು 10 ಅಂಕಗಳನ್ನು ಆಧಾರವಾಗಿಟ್ಟುಕೊಂಡು ನಡೆಸಿದ ಈ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸರು 6.38 ಅಂಕಗಳಿಕೆಯ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ.
ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವುದು, ಅಪರಾಧಿಗಳ ಬಂಧನ, ಕೃತ್ಯದ ಸಾಕ್ಷ್ಯ ಸಂಗ್ರಹಣೆ ಹೀಗೆ ನ್ಯಾಯಾಲಯದಿಂದ ಪ್ರಕರಣದ ತೀರ್ಪು ಬಂದು ಸಂತ್ರಸ್ತರಿಗೆ ನ್ಯಾಯ ದೊರಕುವ ವರೆಗೆ ವಿವಿಧ ಹಂತಗಳಲ್ಲಿ ಪೊಲೀಸ್ ಇಲಾಖೆಯು ನಿರ್ಣಾಯಕ ಪಾತ್ರ ವಹಿಸುವಲ್ಲಿ ಸಫಲವಾಗಿದೆ ಎಂದಿದೆ. ಈ ಎಲ್ಲಾ ಕಾರ್ಯಗಳನ್ನು ನಾಡಿನ ಪೊಲೀಸ್ ಇಲಾಖೆ ದೇಶದ ಇತರೆ ಎಲ್ಲಾ ರಾಜ್ಯಗಳ ಪೊಲೀಸರಿಗಿಂತ ಅತ್ಯಂತ ದಕ್ಷವಾಗಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ.
ನಾಗರಿಕರ ಪ್ರಾಣ ರಕ್ಷಣೆ, ಸಮಾಜಘಾತುಕರ ಹೆಡೆಮುರಿ ಕಟ್ಟಲು ಜೀವದ ಹಂಗು ತೊರೊರೆದು ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕರ್ನಾಟಕ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಧನ್ಯವಾದಗಳನ್ನು ಅರ್ಪಿಸಿದ್ದಾರೆ.