ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಕಂಪನಿ ವಿರುದ್ಧ ಕಾರ್ಮಿಕರ ಮುಷ್ಕರ!
raja dakhani
POWER CITY NEWS: HUBLI ಹುಬ್ಬಳ್ಳಿ: ಕಾರ್ಮಿಕರ ಕಾನೂನು ಬಾಹಿರ ವರ್ಗಾವಣೆ ಖಂಡಿಸಿ ನ.4 ರಂದು ಗೋಕುಲ ರಸ್ತೆಯಲ್ಲಿರುವ ಸ್ವಿಮ್ಸ್ ಟೆಕ್ನಾಲಜೀಸ್ ಪ್ರೈ.ಲಿ ಕಾರ್ಖಾನೆಯ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ವೇಲ್ ಬಿಡಿಕೆ ವಾಲ್ವ್ಸ್ ಯೂನಿಯನ್’ನ ಪ್ರಧಾನ ಕಾರ್ಯದರ್ಶಿ ಅಶೋಕ ಬಾರ್ಕಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಖಾನೆಯಲ್ಲಿ 350ಕ್ಕೂ ಅಧಿಕ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 170 ಖಾಯಂ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಗುಜರಾತ್ ಮೂಲದ ಮಾಲೀಕರು ಈ ಕಂಪನಿ ಖರೀದಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಕಂಪನಿಯ ಸ್ಥಳೀಯ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಕಳೆದ ಜನವರಿ 13 ರಂದು 41 ಜನ ಕಾರ್ಮಿಕರನ್ನು ಗುಜರಾತ್ ರಾಜ್ಯದಲ್ಲಿ ತಮ್ಮ ಯಾವುದೇ ನೊಂದಣಿ ಇರದ ಸಂಸ್ಥೆಗೆ ದಿಢೀರ್ ವರ್ಗಾವಣೆ ಮಾಡಿ ಆದೇಶ ಪತ್ರ ಕೊಟ್ಟಿದ್ದಾರೆ. ಜೊತೆಗೆ ಕಾರ್ಮಿಕರ ಮುಖಂಡರನ್ನು ಒಳಗೊಂಡು 12 ಜನ ಕಾರ್ಮಿಕರ ಅಮಾನತು ಮಾಡಲಾಗಿದೆ. ಜ. 24 ರಿಂದ 41 ಜನ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಕೆಲಸ ನಿರಾಕರಿಸಿ ಫೆ.8 ರಿಂದ 9 ತಿಂಗಳ ವೇತನ ತಡೆಹಿಡಿಯಲಾಗಿದೆ. ಇದರಿಂದಾಗಿ ಈ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಈ ಕುರಿತು ಈಗಾಗಲೇ ಉಪ ಕಾರ್ಮಿಕ ಆಯುಕ್ತರು 15 ಬಾರಿ ರಾಜಿ ಸಂಧಾನ ನಡೆಸಿದರೂ ಸಹ ಫಲಪ್ರದವಾಗಿಲ್ಲ.
ಕಾರ್ಮಿಕ ಆಯುಕ್ತರು ಅಮಾನತಾದ 41 ಕಾರ್ಮಿಕರಿಗೆ ಹುಬ್ಬಳ್ಳಿಯಲ್ಲಿ ಕೆಲಸ ನೀಡುವಂತೆ ಸೂಚಿಸಿದರು ಆಡಳಿತ ವರ್ಗ ಸ್ಪಂದಿಸಿಲ್ಲ. ಜೊತೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ, ಉಪಕಾರ್ಮಿಕ ಆಯುಕ್ತರು ಜೂನ್ 19 ರಂದು 41 ಜನರ ವರ್ಗಾವಣೆ ಕಾನೂನು ಬಾಹಿರವಾಗಿದ್ದು, ಆಡಳಿತ ವರ್ಗದ ಮೇಲೆ ಕಾನೂನು ಕ್ರಮಕ್ಕೆ ಸೂಕ್ತ ಆದೇಶ ಹೊರಡಿಸಬೇಕೆಂದು ಪತ್ರ ಬರೆಯಲಾಗಿದೆ.
ಈ ಕಾರ್ಖಾನೆಯಲ್ಲಿ ಅನ್ಯ ರಾಜ್ಯಗಳಿಂದ 100 ಜನ ಕಾರ್ಮಿಕರನ್ನು ಮತ್ತು ಬೇರೆ ಬೇರೆ ಗುತ್ತಿಗಾರರಿಂದ 200 ಕ್ಕೂ ಹೆಚ್ಚು ಅಧಿಕ ಕಾರ್ಮಿಕರನ್ನು ನೇಮಿಸಿಕೊಂಡು 10-12 ಗಂಟೆಗಳ ಕಾಲ ಕೆಲಸ ಪಡೆಯಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಸಂಬಳ ಕೂಡಾ ನೀಡಲಾಗುತ್ತಿಲ್ಲ. ಈ ಕುರಿತು ಸಚಿವ ಸಂತೋಷ ಲಾಡ್ ಸಂಸ್ಥೆಯ ಮಾಲೀಕರಿಗೆ ಕರೆದು ಸೂಚನೆ ನೀಡಿದರು ಸಹ ಈವರೆಗೆ ಮಾಲೀಕರು ಸ್ಪಂದಿಸಿಲ್ಲ. ಈಗಾಗಲೇ ಸ್ಥಳೀಯ ಶಾಸಕರಿಗೆ ವಿವಿಧ ಸಂಘಟನೆಗಳಿಗೆ ಮನವಿ ಮಾಡಿದ್ದು, ತಮ್ಮ ಹೋರಾಟಕ್ಕೆ ಬೆಂಬಲಿಸುವದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ನ.4 ರಿಂದ ನಮ್ಮ ಬೇಡಿಕೆ ಈಡೇರಿಸುವ ವರೆಗೂ ಅನಿರ್ದಿಷ್ಟವಾಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುನಿಯನ್ ಉಪಾಧ್ಯಕ್ಷ ವಿನೋದ ಕುಮಾರ ವೀರಾಪುರ, ಸದಸ್ಯರಾದ ಮಹದೇವ ಖಂಡೇಕರ, ಜಗದೀಶ್ ಹಂಡೆಮ್ಮನವರ, ಯಲ್ಲಪ್ಪ ಹರಿಜನ ಸೇರಿದಂತೆ ಮುಂತಾದವರು ಇದ್ದರು.