PowerCityNews Hubli : ಹುಬ್ಬಳ್ಳಿ: ಗೋಕುಲ ಗ್ರಾಮದ ಧಾರಾವತಿ ಬೈಪಾಸ್ ರಸ್ತೆಯ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಪ್ರದರ್ಶನಕ್ಕಿಟ್ಟಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದ ಮಾದರಿಯು ಭಕ್ತರ ಗಮನ ಸೆಳೆದಿದೆ.
ಶ್ರೀ ರಾಮ ಮಂದಿರದ ಮಾದರಿಯೊಂದಿಗೆ ರಾಜ್ಯಾದ್ಯಂತ ಪ್ರದರ್ಶನ ಕೈಗೊಂಡಿರುವ ತುಮಕೂರಿನ ಬಿದರೆಯ ವಿನಯ ರಾಮ್ ಇದೀಗ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಕಟ್ಟಿಗೆಯ ತುಂಡುಗಳಿಂದ ಶ್ರೀ ರಾಮ ಮಂದಿರದ ಮಾದರಿಯನ್ನು ತಯಾರಿಸಿದ್ದಾರೆ. 2022ರಿಂದ ನಿರಂತರ ಪ್ರವಾಸ ಕೈಗೊಂಡಿರುವ ಅವರಿಗೆ ಹುಬ್ಬಳ್ಳಿ 73ನೇ ಪ್ರದರ್ಶನ ಸ್ಥಳವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾರ್ವಜನಿಕರು ನ. 23ರವರೆಗೆ ಈ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.
“ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಚಾರಿತ್ರಿಕ ಕ್ಷಣವಾಗಿದೆ. ವಯಸ್ಸಾದವರು, ಬಹಳಷ್ಟು ಜನರಿಗೆ ಅಲ್ಲಿಗೆ ಹೋಗಲು ಆಗುವುದಿಲ್ಲ. ಅಂಥವರು ಶ್ರೀರಾಮ ಮಂದಿರದ ವೀಕ್ಷಣೆ ಮಾಡಲಿ ಎಂಬ ಉದ್ದೇಶದಿಂದ ಕಟ್ಟಿಗೆಯಿಂದ ಮಂದಿರದ ಮಾದರಿಯನ್ನು ತಯಾರಿಸಿ ಪ್ರದರ್ಶನ ಏರ್ಪಡಿಸಿಕೊಂಡು ಬಂದಿದ್ದೇನೆ. ಇದರ ಹಿಂದೆ ಹಣ ಗಳಿಕೆಯ ಉದ್ದೇಶವಿಲ್ಲ” ಎಂದು ವಿನಯ ರಾಮ್ ಹೇಳುತ್ತಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಪೂರ್ವವೇ ಪ್ರದರ್ಶನ ಏರ್ಪಡಿಸಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೆ ರಾಜ್ಯದ 10 ಜಿಲ್ಲೆಗಳು, ಮಂತ್ರಾಲಯ ಸೇರಿ 72 ಸ್ಥಳಗಳಲ್ಲಿ ಪ್ರದರ್ಶನ ಮಾಡಿದ್ದೇನೆ. ಧಾರವಾಡ 11ನೇ ಜಿಲ್ಲೆಯಾಗಿದೆ. ಪ್ರತಿ ಸ್ಥಳದಲ್ಲಿ 7ರಿಂದ 48 ದಿನಗಳವರೆಗೆ ಪ್ರದರ್ಶನ ನಡೆಸಿದ್ದೇನೆ.
ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 108 ಸ್ಥಳಗಳಲ್ಲಿ ಪ್ರದರ್ಶನ ಕ೯ಡಿಸುವ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಇದೀಗ ಶ್ರೀರಾಮನ ತತ್ವ -ಸಿದ್ಧಾಂತ ನಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಸ್ಥಳದಲ್ಲಿ ಪ್ರದರ್ಶನ ಮುಗಿದ ಬಳಿಕ ಶ್ರೀರಾಮ ಮಂದಿರದ ಮಾದರಿಯನ್ನು ಸಂಪೂರ್ಣವಾಗಿ ಬಿಚ್ಚಿ ಎಲ್ಲವನ್ನೂ ದಾರಿಯಲ್ಲಿ ತುಂಬಿಕೊಂಡು ಮುಂದಿನ ಸ್ಥಳಕ್ಕೆ ತೆರಳಿ ಪುನಃ ಜೋಡಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸುತ್ತಾರೆ.