POWERCITY NEWS : HUBBALLI
ಹುಬ್ಬಳ್ಳಿ ಅ.2: ಬಾಹ್ಯ ಹಾಗೂ ಆಂತರಿಕ ಸ್ವಚ್ಛತೆ ಮನುಷ್ಯನ ಉತ್ತಮ ಆರೋಗ್ಯಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ ನಾವು ಹೊರಗಿನ ಪರಿಸರ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಹಾಗೆ ಮಾನಸಿಕವಾಗಿಯೂ ಸ್ವಚ್ಛವಾಗಬೇಕಿದೆ. ಸ್ವಚ್ಛತಾ ಹೀ ಸೇವಾ ಅಭಿಯಾನದ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಬೇಕು. ಆ ಮೂಲಕ ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸೋಣ ಎಂದು ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎಸ್.ಬಿ.ಹಂದ್ರಾಳ ಹೇಳಿದರು.
ಇಂದು ಹಳೇ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹುಬ್ಬಳ್ಳಿ, ವಕೀಲರ ಸಂಘ ಹುಬ್ಬಳ್ಳಿ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಹಾಗೂ ವಾರ್ತಾ ಇಲಾಖೆ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ, ನ್ಯಾಯ, ಸತ್ಯಾಗ್ರಹ ಎಂಬ ಮೂಲತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ಕಟ್ಟೋಣ ಎಂದರು.
ಜಿಲ್ಲಾ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಎಮ್.ಚೆಟ್ಟಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಪ್ರಯುಕ್ತ ಕಳೆದ ಒಂದು ತಿಂಗಳಿಂದ ಸ್ವಚ್ಛತಾ ಹೀ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನದ ಮೂಲಕ ನಗರದ ನೈಮರ್ಲ್ಯಕ್ಕೆ ಶ್ರಮಿಸಬೇಕು. ಸ್ವಚ್ಛತಾ ಕಾರ್ಯಕ್ರಮವನ್ನು ಮೊದಲು ನಮ್ಮ ಮನೆಗಳಿಂದಲೇ ಪ್ರಾರಂಭಿಸಿ ದೇಶದ ಸ್ವಚ್ಛತಾ ಕಾರ್ಯಕ್ರಮದ ಭಾಗವಾಗೋಣ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಎಸ್. ಚಿಣ್ಣನ್ನವರ ಮಾತನಾಡಿ, ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಪೌರ ಕಾರ್ಮಿಕರ ಸೇವೆ ಅಪಾರವಾದದ್ದಾಗಿದೆ. ಗಾಂಧೀಜಿಯವರ ಜನ್ಮ ದಿನಾಚರಣೆ ಹಾಗೂ ಸ್ವಚ್ಛತಾ ಹೀ ಅಭಿಯಾನದ ಅಂಗವಾಗಿ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಎಮ್.ಎಸ್.ಬಾಣದ ಮಾತನಾಡಿ, ಸ್ವಚ್ಛತಾ ಕಾರ್ಯಕ್ರಮವು ಕೇವಲ ಮಹಾತ್ಮ ಗಾಂದೀಜಿ ಜಯಂತಿಗೆ ಸೀಮಿತವಾಗಿರದೇ ನಿರಂತರವಾಗಿ ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಉಪನಗರ ಪೋಲಿಸ್ ಠಾಣೆಯ ನಿರೀಕ್ಷಕರಾದ ಎಮ್.ಎಸ್.ಹೂಗಾರ, ವಕೀಲರ ಸಂಘದ ಕಾರ್ಯದರ್ಶಿಗಳಾದ ಎಚ್.ಎಸ್.ಶಿಗ್ಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಪ್ರಶಾಂತ ಶಿವಮೊಗ್ಗಿ ಸೇರಿದಂತೆ ವಕೀಲರು, ಪೋಲಿಸ್ ಇಲಾಖೆ, ಪೌರ ಕಾರ್ಮಿಕರು ಹಾಗೂ ಕೆ.ಎಮ್.ವಿ ನಿಯಮಿತ ಕಂಪನಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಹುಬ್ಬಳ್ಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.