ಸ್ಥಳೀಯ ಸುದ್ದಿ

14 ಬಾಲ್ಯ ವಿವಾಹ ತಡೆ-2 ಎಫ್‍ಐಆರ್ ದಾಖಲು

ಧಾರವಾಡ

ಪೊಲೀಸ್ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ, ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಪ್ರಸಕ್ತ 2022-2023 ಸಾಲಿನಲ್ಲಿ ಒಟ್ಟು 14 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಮತ್ತು ಬಾಲ್ಯ ವಿವಾಹ ನಡೆದ ಎರಡು ಪ್ರಕರಣಗಳಲ್ಲಿ, ಬಾಲ್ಯ ವಿವಾಹ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಕಮಲಾ ಬೈಲೂರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,   2021-22 ನೇ ಸಾಲಿನಲ್ಲಿ ಒಟ್ಟು 23 ಬಾಲ್ಯ ವಿವಾಹಗಳನ್ನು ತಡೆದು, ಇದಕ್ಕೆ ಸಂಬಂಧಿಸಿದಂತೆ 10 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಮತ್ತು ಕಾನೂನು ಬಾಹಿರವಾಗಿ ಬಾಲ್ಯವಿವಾಹ ನಡೆದ 7 ಪ್ರಕರಣಗಳಲ್ಲಿ ದೂರುದಾಖಲಿಸಲಾಗಿದೆ. 

ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗು. ಇದನ್ನು ಹೊಡೆದೂಡಿಸಲು ವಿವಿಧ ಇಲಾಖೆಯ ಸಹಯೋಗದಲ್ಲಿ ಹಲವಾರು ಅರಿವು, ತರಬೇತಿ ಹಾಗೂ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಬಾಲ್ಯ ವಿವಾಹಕ್ಕೆ ಯಾರಾದರೂ ಬಳಸಿಕೊಂಡರೆ ಅಂತಹರ ವಿರುದ್ದ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಪ್ರಕಾರ ಶಿಕ್ಷಾರ್ಹ ಕ್ರಮಕೈಗೊಂಡು 1 ಲಕ್ಷ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲುವಾಸ ಅಥವಾ ಎರಡನ್ನು ವಿಧಿಸಬಹುದಾಗಿದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿ ಮಗುವಿಗೂ ಶಿಕ್ಷಣ ರಕ್ಷಣೆ ಮತ್ತು ಪೋಷಣೆ ಅವಶ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಬಾಲ್ಯ ವಿವಾಹಗಳಲ್ಲಿ ರಕ್ಷಸಿದ ಮಕ್ಕಳು ಮತ್ತು ಪಾಲಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜುರಪಡಿಸಿ ಬಾಲಕಿಯರನ್ನು ಬಾಲಮಂದಿರ, ತೆರೆದ ತಂಗುದಾಣದಲ್ಲಿ ತಾತ್ಕಾಲಿಕ ಅಭಿರಕ್ಷಣೆ ಪಡೆದು ನಂತರ ಸಮಿತಿಯ ಮುಂದೆ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಾಲಕಿಯರನ್ನು ಪಾಲಕರ ವಶಕ್ಕೆ ಬಿಡಲಾಗಿದೆ. ಬಾಲಕಿಯರಲ್ಲಿ ಶಿಕ್ಷಣ ಮುಂದುವರೆಸಲು ಇಚ್ಚಿಸಿದವರಿಗೆ ಮರಳಿ ಶಾಲೆಗೆ ದಾಖಲಿಸಲಾಗಿದೆ.

ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ಇತರೆ ಇಲಾಖೆಯವರು ಸಹಕಾರ ನೀಡುತ್ತಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಸಹಕಾರ ತೋರಿದಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಿ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button