
ಸಾವಿನಲ್ಲೂ ಸಾರ್ಥಕತೆ ಮೆರೆದ ಯಾದವಾಡದ ಗದಿಗೆಪ್ಪ ಕೋಯಪ್ಪನವರ
ಧಾರವಾಡ
ತಾಲೂಕಿನ ಯಾದವಾಡ ಗ್ರಾಮದ ವೃದ್ಧರೊಬ್ಬರು ದೇಹದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಗದಿಗೆಪ್ಪ ನಿಂಗಪ್ಪ ಕೋಯಪ್ಪನವರ (88) ರೈತಾಪಿ ಕುಟುಂಬದಲ್ಲಿ ಜನಸಿ ಬುಧವಾರ ಸಹಜಸಾವಿಗೆ ಈಡಾಗಿದ್ದಾರೆ.
ತಾವು ಮರಣದ ನಂತರ ತನ್ನ ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೆ ಸಮರ್ಪಿಸುವುದಾಗಿ ಹೇಳಿ 2012ರಲ್ಲಿ ಹುಬ್ಬಳ್ಳಿಯ ಕಿಮ್ಸಗೆ ದೇಹ ಹಾಗೂ ಎಂ.ಎಂ. ಜೋಶಿ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ.

ಗದಿಗೆಪ್ಪ ಅವರ ಆಶಯದಂತೆ ಇವರ ಕುಟುಂಬದವರು ಬುಧವಾರ ಹುಬ್ಬಳ್ಳಿ ಕಿಮ್ಸ್ ಹಾಗೂ ಎಂ.ಎಂ. ಜೋಶಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.
ಮೃತರ ಮನೆಯಲ್ಲಿಯೇ ನೇತ್ರವನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಲಾಯಿತು.
ಹಿರಿಯ ಜೀವಿ ಗದಿಗೆಪ್ಪ ದೇಹದಾನ ಮಾಡಿರುವ ವಿಷಯ ತಿಳಿದ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿ ವಿದಾಯ ಹೇಳಿದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳಿದ್ದಾರೆ.