ಸ್ಥಳೀಯ ಸುದ್ದಿ

ಶಾಲೆ, ಕಾಲೇಜಿನಲ್ಲಿ ಪೋಕ್ಸೊ, ಬಾಲ್ಯವಿವಾಹ ತಡೆಯಿರಿ- ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ

ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿ ಶಾಲೆ, ಕಾಲೇಜಿಗೆ ಒರ್ವ ಶಿಕ್ಷಕಿಯನ್ನು ಆಯ್ಕೆ ಮಾಡಿ, ಮಕ್ಕಳ ರಕ್ಷಣೆಗೆ ಅಗತ್ಯವಿರುವ ಕಾನೂನಾತ್ಮಕ ತಿಳುವಳಿಕೆ ಹಾಗೂ ಮಕ್ಕಳ ರಕ್ಷಣೆಗೆ ಇರುವ ವಿವಿಧ ಕಾಯ್ದೆಗಳ ಕುರಿತು ತರಬೇತಿ ನೀಡಬೇಕು ಮತ್ತು ತರಬೇತಿ ಹೊಂದಿದ ಶಿಕ್ಷಕೀಯರ ಮೂಲಕ ಪ್ರತಿ ತಿಂಗಳು ಶಾಲೆಗಳ ಬಾಲಕಿಯರಿಗೆ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ರಕ್ಷಣಾ ಮಕ್ಕಳ ಘಟಕದ 2ನೇ ಮತ್ತು 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.


ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಸಾಧಿಸಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಇನಷ್ಟು ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳಬೇಕು.


ಶಾಲೆಗೆ ಸೇರಿರುವ ಮತ್ತು ಶಾಲೆಯಿಂದ ಹೊರಗಿರುವ ಪ್ರತಿ ಮಗು ಮಕ್ಕಳ ಹಕ್ಕನ್ನು ಸಂತೋಷದಿಂದ ಅನುಭವಿಸುವಂತಹ ವಾತಾವರಣ ಸೃಷ್ಠಿಸಬೇಕು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳನ್ನು ರಕ್ಷಿಸಬೇಕು. ಮಕ್ಕಳಿಗೆ ಪೋಕ್ಸೋ, ಲೈಂಗಿಕ ದೌರ್ಜನ್ಯದ ಬಗ್ಗೆ ತಿಳುವಳಿಕೆ ನೀಡಿ, ಅವರಲ್ಲಿ ಎಚ್ಚರಿಕೆ ಮೂಡಿಸಬೇಕು ಎಂದು ಹೇಳಿದರು.


ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ, ಇತ್ಯರ್ಥಪಡಿಸಬೇಕು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪಾಲಕರ ಹಾಗೂ ಮಕ್ಕಳ ಪಾತ್ರ ಮುಖ್ಯವಾಗಿರುತ್ತದೆ. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಮತ್ತು ಮಧ್ಯವರ್ತಿಗಳು ಕಂಡು ಬಂದಲ್ಲಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯಿಂದ ನೊಂದ ಮಕ್ಕಳನ್ನು ತಾತ್ಕಾಲಿಕವಾಗಿ ಅಭಿರಕ್ಷಣೆ ಮಾಡುವ ಸಂದರ್ಭದಲ್ಲಿ ಸರ್ಕಾರೆತರ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಅಲ್ಲಿನ ಮೂಲಭೂತ ಸೌಕರ್ಯ, ಮಕ್ಕಳ ಸ್ನೇಹಿ ಪರಿಸರ ಇರುವ ಬಗ್ಗೆ ಕಾತ್ರಿ ಪಡಿಸಿಕೊಳಬೇಕು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಪ್ರಕಟಿಸಿರುವ ಘನತೆಯ ಬದುಕು ಕೈಪಿಡಿಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಕಮಲಾ ಬೈಲೂರ ಸಭೆ ನಿರ್ವಹಿಸಿ ಮಕ್ಕಳ ರಕ್ಷಣಾ ಘಟಕದ ಕಾರ್ಯಗಳನ್ನು ಪ್ರಸ್ತುತ ಪಡಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ, ಉಪ ಪೊಲೀಸ ಆಯುಕ್ತ ಗೋಪಾಲ ಬ್ಯಾಕೋಡ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಡಿವೈಎಸ್‍ಪಿ ಮಲ್ಲಿಕಾರ್ಜುನ.ಬಿ.ಸಂಕದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ, ತಾಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್.ತನುಜಾ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕಾರ್ಮಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ತನಿಖಾ ಸಮಿತಿ ಸದಸ್ಯರು, ಬಾಲ ನ್ಯಾಯಮಂಡಳಿ ಸದಸ್ಯರು, ಮಕ್ಕಳ ಪಾಲನಾ ಸಂಸ್ಥೆಯ ಅಧಿಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button