ಸ್ಥಳೀಯ ಸುದ್ದಿ

ಕಳಪೆ ಕಾಮಗಾರಿಗೆ ಗರಂ ಆದ ಶಾಸಕ ಅಮೃತ ದೇಸಾಯಿ

ಧಾರವಾಡ

ಧಾರವಾಡ ತಾಲೂಕಿನ ಯಾದವಾಡದಿಂದ ನರೇಂದ್ರ ಗ್ರಾಮದವರೆಗೆ ನಡೆದ ರಸ್ತೆ ಕಾಮಗಾರಿಯನ್ನು ಸ್ವತಃ ಪರಿಶೀಲಿಸಿದ ಶಾಸಕ ಅಮೃತ ದೇಸಾಯಿ, ಅದು ಕಳಪೆಯಾಗಿರುವುದನ್ನು ಕಂಡು ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.

ಯಾದವಾಡ ಗ್ರಾಮದಿಂದ ನರೇಂದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು ಐದು ಕೋಟಿ ರೂಪಾಯಿ ಮೊತ್ತದಲ್ಲಿ ಈ ರಸ್ತೆ ನಿರ್ಮಾಣ ಮಾಡಲಾಗಿದೆ.

ರಸ್ತೆ ನಿರ್ಮಾಣವಾದ ಕೆಲವೇ ತಿಂಗಳಲ್ಲಿ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದೆ. ಗಾಂವಕರ ಎನ್ನುವವರು ಈ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿದ್ದರು. ರಸ್ತೆ ಹದಗೆಟ್ಟ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ತರಬೇಕು ಎಂದರೆ ನಾವು ಅದಕ್ಕೆ ವಹಿಸಿದ ಶ್ರಮ ನಿಮಗೇನು ಗೊತ್ತು? ಈ ರಸ್ತೆಯಲ್ಲಿ ರೈತರು ದಿನನಿತ್ಯ ಸಂಚರಿಸುತ್ತಾರೆ. ಕಬ್ಬಿನ ಗಾಡಿಗಳು ಹೋಗುತ್ತವೆ. ಹೀಗಿರುವಾಗ ರಸ್ತೆಯನ್ನು ಕಳಪೆ ಮಾಡಿರುವುದು ಏಕೆ? ಗುತ್ತಿಗೆದಾರರನ್ನು ಕರೆಯಿರಿ ಎಲ್ಲಿದ್ದಾರೆ ಅವರು ಎಂದು ಗರಂ ಆದರು. ಗುತ್ತಿಗೆದಾರ ಸ್ಥಳಕ್ಕೆ ಬರದೇ ಅವರ ಸಂಬಂಧಿಕರನ್ನು ಕಳುಹಿಸಿಕೊಟ್ಟಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ಶಾಸಕರು, ಎಲ್ಲೋ ಕುಳಿತುಕೊಂಡು ಟೆಂಡರ್ ಹಾಕುತ್ತಾರೆ. ಅವರ ಸೌಕಾರಕಿ ನಮ್ಮ ಮುಂದ ತೋರಸಬ್ಯಾಡ ಅಂತಾ ಹೇಳು. ಆ ಸೌಕಾರಕಿ ಅಲ್ಲೇ ಇಟಕೋ ಅಂತ ಹೇಳು ಎಂದು ತರಾಟೆಗೆ ತೆಗೆದುಕೊಂಡರು.

ಮಳೆ ನಿಂತ ಮೇಲೆ ಮತ್ತೊಮ್ಮೆ ಈ ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಬೇಕು. ಪ್ಯಾಚ್ ವರ್ಕ್ ಮಾಡುವಂತಿಲ್ಲ. ರಸ್ತೆ ಪೂರ್ತಿ ಡಾಂಬರೀಕರಣವಾದ ಮೇಲೆ ನಾನು ಮತ್ತೆ ಪರಿಶೀಲನೆ ನಡೆಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button