ವಿನಯ್ ಕುಲಕರ್ಣಿ ಪಕ್ಷಬೇಧ ಮಾಡಲಿಲ್ಲ, ಎಲ್ಲರಿಗೂ ಸೌಲಭ್ಯ ದೊರೆಯುವಂತೆ ಮಾಡಿದರು: ಶಿವಲೀಲಾ ಕುಲಕರ್ಣಿ
ಧಾರವಾಡ
ವಿನಯ್ ಕುಲಕರ್ಣಿ ಸಚಿವರಿದ್ದ ಸಮಯದಲ್ಲಿ ಯಾವುದೇ ಪಕ್ಷಬೇಧ ಮಾಡಲಿಲ್ಲ. ಸಣ್ಣ ಹುಡುಗ ಬಂದರೂ ಸಹಿತ ಅವರ ಕೆಲಸ ಮಾಡಿ ಕೊಟ್ಟು ಜನಮಾನಸದಲ್ಲಿ ಉಳಿದವರು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದರು.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ವಿನಯ್ ಕುಲಕರ್ಣಿ ಅವರು ಸಚಿವರಿದ್ದ ಸಮಯದಲ್ಲಿ ಯಾವುದೇ ಪಕ್ಷ ನೋಡದೇ ಯಾರೇ ಬಂದರೂ ಸಮಾನ ಅವಕಾಶ ಕೊಟ್ಟು ಅವರ ಕೆಲಸ ಮಾಡಿಕೊಟ್ಟಿದ್ದರು. ಯಾವುದನ್ನೂ ಲೆಕ್ಕ ಇಡದೇ ನನ್ನ ಬೆಂಬಲಕ್ಕೆ ಇಷ್ಟು ಜನ ಇದ್ದಾರಲ್ಲ ಎಂಬ ಲೆಕ್ಕ ಮಾತ್ರ ಹೇಳುತ್ತಿದ್ದರು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ತವನಪ್ಪ ಅಷ್ಟಗಿ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ವಿನಯ್ ಕುಲಕರ್ಣಿ ಎಂದುಕೊಂಡು ಕೆಲಸ ಮಾಡಬೇಕಿದೆ. ಚುನಾವಣೆಗೆ ಇನ್ನು 15 ದಿನ ಮಾತ್ರ ಬಾಕಿ ಉಳಿದಿದ್ದು, ಬಿಜೆಪಿಗೆ ಮುಜುಗರ ಆಗುವ ರೀತಿಯಲ್ಲಿ ಈ ಬಾರಿ ಕಾಂಗ್ರೆಸ್ ಫಲಿತಾಂಶ ಬರಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಬೊಮ್ಮಾಯಿ ಅವರು ಈ ರಾಜ್ಯದಲ್ಲಿ ಏನಾದರೂ ಅಭಿವೃದ್ಧಿ ಕೆಲಸ ಮಾಡಿದ್ದರೆ ನೀವು ಬೇರೆ ಬೇರೆ ರಾಜ್ಯದವರನ್ನು ಇಲ್ಲಿಗೆ ಕರೆಯಿಸುವ ಅವಶ್ಯಕತೆ ಇರುತ್ತಿರಲಿಲ್ಲ.
ಬಿಜೆಪಿಯವರು ವೈಯಕ್ತಿಕ ತೇಜೋವಧೆ ಮಾಡುವುದನ್ನು ಬಿಟ್ಟು ಆ ಕೆಲಸವನ್ನು ಅಭಿವೃದ್ಧಿ ವಿಷಯದಲ್ಲಿ ತೋರಿಸಬೇಕು. ಇಂದು ರಾಜ್ಯದಾದ್ಯಂತ ಬೆಳೆದ ಹೆಸರು ವಿನಯ್ ಕುಲಕರ್ಣಿ ಅವರದ್ದು. ಅವರ ತೇಜೋವಧೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ನಾವು ಜಗ್ಗುವುದಿಲ್ಲ ಹೆದರುವುದಿಲ್ಲ. ಬೊಮ್ಮಾಯಿ ಅವರೇ ನೀವೇ ರಾಜ್ಯದಲ್ಲಿ ಅಭಿವೃದ್ಧಿ ಮಾಡಿದ್ದರೆ ಯೋಗಿ ಆದಿತ್ಯನಾಥ, ನಡ್ಡಾ, ಅಮಿತ್ ಶಾ ಅವರನ್ನು ಕರೆಯಿಸುವ ಅಗತ್ಯವಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಹಿರಂಗ ಸಭೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ಹಿರಿಯ ಮುಖಂಡರು ಸಹ ಪಾಲ್ಗೊಂಡು ವಿನಯ್ ಕುಲಕರ್ಣಿ ಅವರಿಗೆ ಬೆಂಬಲ ಸೂಚಿಸಿದರು.
ಇದೇ ಸಂಧರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮಂಜುನಾಥ ತಿರ್ಲಾಪುರ,ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆತ್ಮಾನಂದ ಹುಂಬೇರಿ,ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಈಶ್ವರ ಅಯ್ಯಗಾರವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.