ಅಣ್ಣಿಗೇರಿ ಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ S P ಮುನೇನಕೊಪ್ಪ!
ಅಣ್ಣಿಗೇರಿ: ಸಾಪೂರ ಗ್ರಾಮದ ಹತ್ತಿರದಲ್ಲಿನ 76 ಎಕರೆ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕೆರೆಯ ಜಲಸಂಗ್ರಹಗಾರಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಅಣ್ಣಿಗೇರಿಯ ಶಾಶ್ವತ ಕುಡಿಯುವ ನೀರಿಗೆ ಪರಿಹಾರ
–ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಹುಬ್ಬಳ್ಳಿ ( ಕರ್ನಾಟಕ ವಾರ್ತೆ ) :
76 ಎಕರೆ ವಿಸ್ತೀರ್ಣದಲ್ಲಿ ಹೊಸದಾಗಿ ಕೆರೆಯನ್ನು ನಿರ್ಮಿಸಲಾಗಿದ್ದು. ಇಂದಿನಿಂದ 45 ದಿನಗಳಲ್ಲಿ ಕೆರೆಯು ತುಂಬಲಿದೆ. ಇದರಿಂದ ಅಣ್ಣಿಗೇರಿ ಪಟ್ಟಣದ ಶಾಶ್ವತ ಕುಡಿಯುವ ನೀರಿಗೆ ಪರಿಹಾರ ದೊರೆತಂತೆ ಆಗಲಿದೆ ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಇಂದು ಬಸಾಪೂರ ಗ್ರಾಮದ ಹತ್ತಿರದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಅಣ್ಣಿಗೇರಿ ಪುರಸಭೆ, ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಆಯೋಜಿಸಿದ್ದ ಅಣ್ಣಿಗೇರಿ ಪಟ್ಟಣಕ್ಕೆ 24 × 7 ನಿರಂತರ ಕುಡಿಯುವ ನೀರಿನ ಸರಬರಾಜು ಕಾಮಗಾರಿ 34.88 ಕೋಟಿ ಅನುದಾದಡಿಯಲ್ಲಿ ಬಸಾಪೂರ ಗ್ರಾಮದ ಹತ್ತಿರ ಮಲಪ್ರಭಾ ಬಲದಂಡೆ ಕಾಲುವೆಗೆ ಹೊಂದಿರುವ ಹೊಸದಾಗಿ ನಿರ್ಮಾಣಗೊಂಡ ಕೆರೆಯ ಜಲಸಂಗ್ರಹಗಾರಕ್ಕೆ ನೀರು ತುಂಬಿಸುವ ಕಾರ್ಯ ಮತ್ತು ರೂ.8.50 ಕೋಟಿ ಅನುದಾನದಲ್ಲಿ ಅಣ್ಣಿಗೇರಿ ನವಲಗುಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆರೆಯ ಸುತ್ತಲೂ ಅರಣ್ಯ ಇಲಾಖೆಯಿಂದ ಗಿಡ ನೆಡಲಾಗುತ್ತದೆ. ಇದೊಂದು ಪ್ರವಾಸಿ ತಾಣವಾಗಲಿದೆ. ಅಣ್ಣಿಗೇರಿ ಪಟ್ಟಣಕ್ಕೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ನವಲಗುಂದ ವಿಧಾನಸಭಾ ಕ್ಷೇತ್ರದ ಎಲ್ಲ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. 5 ಸಾವಿರ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಜವಳಿ ಪಾರ್ಕ್ ಆರಂಭಿಸಲಾಗುತ್ತಿದೆ. ಸಂಸದ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ ಅವರ ಸಹಕಾರದಿಂದ ಈ ಕಾಮಗಾರಿ ಕೈಗೂಡಿರುತ್ತದೆ. ರೈತರು ಮುಂದೆ ಬಂದು ಭೂಮಿಯನ್ನು ಕೊಟ್ಟಿದ್ದಕ್ಕಾಗಿ ಅಭಿನಂದನೆ ಸಲ್ಲಿಸುವೆ. ಸುಮಾರು 20 ವರ್ಷಗಳ ನಿರಂತರ ಪ್ರಯತ್ನದಿಂದ ಈ ಕಾರ್ಯರೂಪಕ್ಕೆ ಬಂದಿದೆ. ಅಣ್ಣಿಗೇರಿಗೆ ಕುಡಿಯುವ ನೀರಿನ ಬವಣೆ ನೀಗಲಿದೆ. ಶಾಲಾ ಕೊಠಡಿ, ಡೆಸ್ಕ್, ಬಣ್ಣ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿದೆ. ಈ ಹಿಂದೆ 15 ದಿನಗಳಿಗೊಮ್ಮೆ ಅಣ್ಣಿಗೇರಿ ಪಟ್ಟಣಕ್ಕೆ ನೀರು ಒದಗಿಸಲಾಗುತ್ತಿತ್ತು. ಈಗ 10 ದಿನಗಳಿಗೊಮ್ಮೆ ನೀರು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ವಾರದ ಏಳು ದಿನಗಳಂದು ನೀರು ವಿತರಿಸಲಾಗುತ್ತದೆ ಎಂದರು.
ಪದ್ಮಶ್ರೀ ಪುರಸ್ಕೃತ ಅಬ್ದುಲ್ ಸಾಬ್ ನಡಕಟ್ಟಿನ ಮಾತನಾಡಿ, ಕಳೆದ 50 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಹೋರಾಟ ಮಾಡಿದ್ದೇವೆ. ಇಂದು ಅಣ್ಣಿಗೇರಿ ಜನರಿಗೆ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದೊಂದು ಉತ್ತಮ ಕಾರ್ಯವಾಗಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ರವಿಕುಮಾರ ಮಾತನಾಡಿದರು. ವಿರೇಶ ಹಸಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಡ್ಡು ಮುತ್ಯಾ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು.
ಅಣ್ಣಿಗೇರಿ ಪುರಸಭೆಯ ಅಧ್ಯಕ್ಷೆ ಗಂಗಾ ಕರೆಟ್ಟನವರ, ಉಪಾಧ್ಯಕ್ಷೆ ಜಯಲಕ್ಷ್ಮಿ ಜಕರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾಜಾನ್ ಮುಲ್ಲಾನವರ, ಮುಖಂಡರಾದ ಷಣ್ಮುಖಪ್ಪ ಗುರಿಕಾರ, ಬ್ರಹ್ಮಕುಮಾರಿ ಜಯಂತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಮಾಬುಬಿ ನವಲಗುಂದ ಸ್ವಾಗತಿಸಿದರು. ಮಂಜುಳಾ ರೋಣದ ಪ್ರಾರ್ಥಿಸಿದರು.