8 ಸುಳ್ಳು ಜಾತಿ ಪ್ರಮಾಣ ಪತ್ರಗಳು ರದ್ದು : ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಡಿಸಿ ನಿತೇಶ ಪಾಟೀಲ್ ಸೂಚನೆ
ಧಾರವಾಡ
ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದ ಬಗ್ಗೆ 10 ಪ್ರಕರಣಗಳಲ್ಲಿ ದೋಷಾರೋಪಣೆ ಕಂಡುಬಂದಿತ್ತು. ಇವುಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿ, ವಿತರಣೆ ಮಾಡಿದ 8 ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಲಾಗಿದೆ. ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ದ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ 3ನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.
2 ಪ್ರಕರಣಗಳಲ್ಲಿ ನಿಜವಾಗಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ಇವುಗಳನ್ನು ಮಾನ್ಯ ಮಾಡಲಾಗಿದೆ ಎಂದರು.
ಸಭೆಯಲ್ಲಿ ವಿಶೇಷ ಕಾನೂನು ಸಲಹೆಗಾರರ ಹುದ್ದೆ ನೇಮಕಾತಿ, ಕುಂಬಾರಕೊಪ್ಪ ಗ್ರಾಮದ ಟೆನೆಂಟ್ ಕೋ ಆಪರೇಟಿವ್ ಸೊಸೈಟಿ, ಅಳ್ನಾವರ ತಾಲೂಕಿನ ದೊಪೆನಟ್ಟಿ ಗ್ರಾಮದ ಯಲ್ಲಪ್ಪ ಕರೆಯಪ್ಪ ಹರಿಜನ ಅವರಿಗೆ ಮಂಜೂರಾದ ಜಮೀನು, ಪರಿಶಿಷ್ಟ ವರ್ಗದ ಜನಸಂಖ್ಯೆ ಹೆಚ್ಚಿರುವ ಕಾಲೋನಿಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಕುಂದಗೋಳ ತಾಲೂಕಿನ ಗುರುವಿನಹಳ್ಳಿ ಗ್ರಾಮದ ರತ್ನವ್ವಾ ಕೋಂ ನಾಗಪ್ಪ ಪಡೆಸೂರು ಪ್ರವರ್ಗ 01 ಭೋಯಿ ಬದಲಾಗಿ ಪರಿಶಿಷ್ಟ ಜಾತಿಯ ಭೋವಿ ಪ್ರಮಾಣ ಪತ್ರ ಪಡೆದ ಕುರಿತು ಕುಂದಗೋಳ ತಹಶಿಲ್ದಾರರ 15 ದಿನದಲ್ಲಿ ಸಮಿತಿಗೆ ಪರಿಶೀಲನಾ ವರದಿ ನೀಡುವಂತೆ ಸೂಚಿಸಲಾಯಿತು. ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕಲ್ಯಾಣ ಸಂಘದ ವತಿಯಿಂದ ನಡೆಯುವ ಫ್ರೌಡಶಾಲೆಗಳೆ ಜಮೀನು ಮಂಜೂರು ಮಾಡುವ ಕುರಿತು ಚರ್ಚಿಸಲಾಯಿತು.
ಸರ್ಕಾರಿ ಅಭಿಯೋಜಕರು ಜಿಲ್ಲೆಯಲ್ಲಿ ಒಟ್ಟು ಪರಿಶಿಷ್ಟ ಜಾತಿ ಹಾಗೂ ದೌರ್ಜನ್ಯ ತಡೆ ಕಾಯ್ದೆ ಅಡಿ 143 ಪ್ರಕರಣಗಳು ದಾಖಲಾಗಿದ್ದು 2 ಪ್ರಕರಣಗಳು ವಿಲೇವಾರಿಯಾಗಿವೆ. 141 ಪ್ರಕರಣಗಳು ಬಾಕಿಯಿವೆ ಎಂದು ಸಭೆಗೆ ತಿಳಿಸಿದರು.
ಹುಬ್ಬಳ್ಳಿ ಹೆಗ್ಗಿರಿ ಆರ್ಯವೇದ ಮಹಾವಿದ್ಯಾಲಯದ ಪ್ರಾಂಶುಪಾಲರಿಗೆ ರೋಸ್ಟರ್ ಆಧಾರದ ಮೇಲೆ ಬ್ಲಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮುಚ್ಚಳಿಕೆಯನ್ನು ಸಮಿತಿ ನೀಡುವಂತೆ ತಿಳಿಸಲಾಯಿತು. ಇತ್ಯರ್ಥವಾದ ವಿಷಯಗಳನ್ನು ಸಭೆಯ ನಡಾವಳಿಯಿಂದ ಕೈಬಿಟ್ಟು ಹೊಸ ವಿಷಯಗಳನ್ನು ಮುಂದಿನ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪೊಲೀಸ್ ಆಯುಕ್ತ ಲಾಭುರಾಮ್, ಧಾರವಾಡ ಪೊಲೀಸ್ ವರಿಷಿಷ್ಠಾಧಿಕಾರಿ ಪಿ.ಕೃಷ್ಣಕಾಂತ್,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ್, ಜಾಗೃತಿ ಸಮಿತಿ ಸದಸ್ಯರಾದ ಅಶೋಕ ದೊಡ್ಡಮನಿ, ಇಂದುಮತಿ ಶಿರಗಾವ, ಅರ್ಜುನ ವಡ್ಡೇರ್, ರಮೇಶ್ ಹುಲಿಕೊಪ್ಪ, ಸಿದ್ದಲಿಂಗಪ್ಪ ಕೆರೆಮ್ಮನವರ, ಇಸೆಬೆಲ್ಲಾ ಝವೀಯರ್, ಕಾಡಯ್ಯ ಹೆ್ಬ್ಬಬ್ಬಳ್ಳಿ ಮಠ, ಕಸ್ತೂರಿ ಹಳ್ಳದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.