ಅಕ್ರಮ ಮದ್ಯ ಸಾಗಾಟ ಆರೋಪಿ ಬಂಧನ, ಮುಂಬೈ ಮೂಲದ ಕಾರ್ ಜಪ್ತಿ…
ಧಾರವಾಡ
ಇಲ್ಲಿನ ನರೇಂದ್ರ ಗ್ರಾಮದ ಹುಬ್ಬಳ್ಳಿ ಧಾರವಾಡ ಬೈಪಾಸ್ ಟೋಲ್ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ 69 ಸಾವಿರ ರೂ.ಮೌಲ್ಯದ 345 ಲೀಟರ್ ಮದ್ಯಸಾರ ಹಾಗೂ ವಾಹನವನ್ನು ಅಬಕಾರಿ ಉಪ ಅಧೀಕ್ಷಕರು ವಶಪಡಿಸಿಕೊಂಡಿದ್ದಾರೆ.
ಸೋಮವಾರ ನಸುಕಿನ ಜಾವ 3.45 ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಎಂಎಚ್.04 ಇ ಎಫ್ 6258 ನೋಂದಣಿ ಸಂಖ್ಯೆಯ ಫೋರ್ಡ್ ಐಕಾನ್ ಕಾರನ್ನು ತಡೆದು ತಪಾಸಣೆ ಮಾಡಿದಾಗ, 16 ಕ್ಯಾನುಗಳಲ್ಲಿದ್ದ 320 ಲೀಟರ್ ಹಾಗೂ ಪ್ಲಾಸ್ಟಿಕ್ ಕ್ಯಾರಿಬ್ಯಾಗುಗಳಲ್ಲಿದ್ದ 25 ಲೀಟರ್ ಸೇರಿ ಒಟ್ಟು 345 ಲೀಟರ್ ಅಕ್ರಮ ಮದ್ಯ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ,ವಾಹನ ಚಾಲಕ ಹಳೆಹುಬ್ಬಳ್ಳಿಯ ಚನ್ನಬಸವ ಸಾಲಿಮಠ ಉರ್ಫ್ ರಾಜು ಚಿಕ್ಕಮಠ ಅವರನ್ನು ದಸ್ತಗಿರಿ ಮಾಡಲಾಗಿದೆ. ಇನ್ನೋರ್ವ ಆರೋಪಿ ಹುಬ್ಬಳ್ಳಿ ಶಾಂತಿನಿಕೇತನ ಕಾಲನಿಯ ಸುನೀಲ ಶಂಕರ ಬಳ್ಳಾರಿ ಹಾಗೂ ವಾಹನ ಮಾಲೀಕ ಮುಂಬೈನ ರಾಮು ಗಾಯಕವಾಡ ಅವರನ್ನು ಪತ್ತೆ ಮಾಡಲಾಗುತ್ತಿದೆ.
ಬೆಳಗಾವಿ ವಲಯಸ ಅಬಕಾರಿ ಜಾರಿ ಮತ್ತು ಅಪರಾಧ ವಿಭಾಗದ ಅಪರ ಆಯುಕ್ತ ಡಾ.ವೈ.ಮಂಜುನಾಥ,ಧಾರವಾಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಕೆ.ಪ್ರಶಾಂತಕುಮಾರ ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಉಪ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ,ಅಬಕಾರಿ ನಿರೀಕ್ಷಕಿ ನೇತ್ರಾ ಉಪ್ಪಾರ,ಕಾನ್ಸ್ಟೇಬಲ್ಗಳಾದ ಜಾನ್ ವರ್ಗೀಸ್,ಎಸ್.ವಿ.ಕಮ್ಮಾರ,ಎಸ್.ಜಿ.ಮುಜಾವರ,ರವಿಕುಮಾರ ಬಿಲಕಾರ ಹಾಗೂ ಚಾಲಕ ಬಲವಂತ ಫಡಕೆ ಪಾಲ್ಗೊಂಡಿದ್ದರು.