150 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನ ವಿನ್ಯಾಸ ಕೇಂದ್ರ : ಅಶ್ವತ್ಥನಾರಾಯಣ!
ಬೆಳಗಾವಿ: ವಿಶೇಷ ಹೂಡಿಕೆ ವಲಯಗಳ ಅಭಿವೃದ್ಧಿಗೆ ಸಿಎಂ ಜತೆ ಶೀಘ್ರವೇ ಮಾತುಕತೆ!
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಕ್ಲಸ್ಟರ್ ಸೇರಿದಂತೆ ರಾಜ್ಯದೆಲ್ಲೆಡೆ ಉದ್ದಿಮೆಗಳನ್ನು ಬೆಳೆಸುವ ಗುರಿಯಿಂದ ‘ವಿಶೇಷ ಹೂಡಿಕೆ ವಲಯ’ಗಳನ್ನು ತ್ವರಿತ ಗತಿಯಲ್ಲಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳ ಜತೆ ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು. ಜತೆಗೆ ಈ ಭಾಗದ ಬೆಳಗಾವಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ‘ಗ್ಲೋಬಲ್ ಎಮರ್ಜಿಂಗ್ ಟೆಕ್ನಾಲಜಿ ಡಿಸೈನ್ ಸೆಂಟರ್’ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಪೂರ್ವಭಾವಿಯಾಗಿ ಸೋಮವಾರ ಇಲ್ಲಿ ನಡೆದ ಬಿಯಾಂಡ್ ಬೆಂಗಳೂರು, ‘ಟೆಕ್ಸೆಲರೇಷನ್’ ಔದ್ಯಮಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿಗಳನ್ನು ಒಳಗೊಂಡ ಕ್ಲಸ್ಟರ್ ನಲ್ಲಿ 500 ಎಕರೆ ಪ್ರದೇಶದಲ್ಲಿ ಭಾರತದ ಪ್ರಪ್ರಥಮ ವಿದ್ಯುತ್ ವಾಹನಗಳ ಕಸ್ಲರ್ ಮತ್ತು ನವೋದ್ಯಮಗಳ ಹಬ್ ಅಭಿವೃದ್ಧಿಯ ಜತೆಗೆ 20 ಸಾವಿರ ಜನರು ಕೆಲಸ ಮಾಡುವಂತಹ ಟೆಕ್ಪಾರ್ಕ್ ಸ್ಥಾಪನೆಗೂ ಅಗತ್ಯ ಹೆಜ್ಜೆಗಳನ್ನು ಇಡಲಾಗುವುದು. ಇಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡಲು ಹುಬ್ಬಳ್ಳಿ ಕ್ಲಸ್ಟರ್ ಸೀಡ್ ಫಂಡ್ಗೆ 25 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಭರವಸೆ ನೀಡಿದರು.
ಧಾರವಾಡದಲ್ಲಿ ಸ್ಥಾಪನೆಯಾಗಿರುವ ಐಐಟಿ ಮತ್ತು ಐಐಐಟಿಗಳು ನಿಸ್ಸಂಶಯವಾಗಿಯೂ ಉತ್ತರ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಹೆಬ್ಬಾಗಿಲುಗಳಾಗಲಿವೆ. ಇದೇ ರೀತಿಯಲ್ಲಿ ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯನ್ನೂ ಸಮಗ್ರವಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಸಕಾರಾತ್ಮಕ ಫಲಿತಾಂಶ ಇನ್ನು ಒಂದೆರಡು ವರ್ಷಗಳಲ್ಲಿ ಕಂಡುಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸ್ಟಾರ್ಟಪ್ ಹಬ್ನಡಿ 5 ಸಾವಿರ ನವೋದ್ಯಮಗಳಿಗೆ ವಿಶ್ವ ದರ್ಜೆಯ ಮೂಲಸೌಲಭ್ಯ ಒದಗಿಸಲಾಗುವುದು. ಈಗಾಗಲೇ 400 ಸ್ಟಾರ್ಟಪ್ಗಳಿಗೆ ಬೆಂಬಲ ನೀಡಿದ್ದು, ಈ ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಇನ್ನೂ 400 ಉದ್ದಿಮೆಗಳಿಗೆ ನೆರವು ಒದಗಿಸಲಾಗುವುದು ಎಂದು ಅವರು ವಿವರಿಸಿದರು.
ಎಂಜಿನಿಯರಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ಗೆ ಉತ್ತೇಜನ ನೀಡಲು 10 ಸಾವಿರ ಚದರ ಅಡಿ ವಿಸ್ತೀರ್ಣದ ಪ್ಲಗ್ ಇನ್ ಪ್ಲೇ ಸ್ವರೂಪದ ಉದ್ದಿಮೆಯನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಇದರ ಜತೆಗೆ 5 ಉತ್ಕೃಷ್ಟತಾ ಕೇಂದ್ರಗಳನ್ನೂ ಅಸ್ತಿತ್ವಕ್ಕೆ ತರಲಾಗುವುದು. ಇವುಗಳ ಮೂಲಕ ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಅಶ್ವತ್ಥನಾರಾಯಣ ನುಡಿದರು.
ಇಂದು ಕೃಷಿಯಿಂದ ಹಿಡಿದು ಬೀದಿ ಬದಿಯ ವ್ಯಾಪಾರದವರೆಗೂ ಡೇಟಾ ಮತ್ತು ಡಿಜಿಟಲೀಕರಣ ಮಹತ್ವದ ಪಾತ್ರ ವಹಿಸುತ್ತಿವೆ. ಇದಕ್ಕೆ ಪೂರಕವಾಗಿ ಸೈಬರ್ ಸೆಕ್ಯುರಿಟಿ ತರಹದ ಆಧುನಿಕ ಕ್ಷೇತ್ರಗಳಿಗೆ ಒತ್ತು ಕೊಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯಮಿಗಳು ನವೋದ್ಯಮಗಳನ್ನು ಸ್ಥಾಪಿಸಲು ಸಕಲ ನೆರವನ್ನೂ ಕೊಡಲಾಗುತ್ತಿದೆ. ರಾಜ್ಯದಲ್ಲಿ ಇನ್ನು 3 ವರ್ಷಗಳಲ್ಲಿ 300 ಶತಕೋಟಿ ಡಾಲರ್ ಆರ್ಥಿಕತೆಯನ್ನು ಸಾಧಿಸಲು ಸಮಾನ ಬೆಳವಣಿಗೆ ಮುಖ್ಯವಾಗಿದೆ ಎಂದು ಸಚಿವರು ಪ್ರತಿಪಾದಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಸರಕಾರವು ಕೈಗೊಳ್ಳುವ ಕ್ರಮಗಳು ಮತ್ತು ಯೋಜನೆಗಳು ವಸ್ತುನಿಷ್ಠವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಈ ಭಾಗದಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಹೆಚ್ಚಾಗಬೇಕು. ಇದಕ್ಕಾಗಿ ಉದ್ಯಮಗಳನ್ನು ಕೂರಿಸಿಕೊಂಡು ಮಾತನಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಶಂಕರ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ, ಎಂಎಲ್ಸಿ ಸಂಕನೂರು, ಕೆಡಿಇಎಂ ಮುಖ್ಯಸ್ಥ ಬಿ ವಿ ನಾಯ್ಡು, ಸಿಇಒ ಸಂಜೀವ್ ಗುಪ್ತ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ವೆಂಚರ್ ಕ್ಯಾಪಿಟಲಿಸ್ಟ್ ರವೀಂದ್ರ ಕೃಷ್ಣಪ್ಪ, ನಾಸ್ಕಾಂ ಕರ್ನಾಟಕದ ಮುಖ್ಯಸ್ಥ ಭಾಸ್ಕರ್ ವರ್ಮ, ಜಿತೇಂದ್ರ ಛಡ್ಡಾ, ಕಿಂಡ್ರಲ್ ಇಂಡಿಯಾದ ಮುಖ್ಯಸ್ಥ ಲಿಂಗರಾಜ ಸಾಹುಕಾರ್, ಉಮಾಕಾಂತ್ ಸೋನಿ ಉಪಸ್ಥಿತರಿದ್ದರು.
ಹುಬ್ಬಳ್ಳಿ-ದೆಹಲಿ ನೇರ ವಿಮಾನ ಸೌಲಭ್ಯ ಹೆಚ್ಚಳ: ಜೋಶಿ
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇನ್ನು ಕೆಲವೇ ದಿನಗಳಲ್ಲಿ ಹುಬ್ಬಳ್ಳಿ-ದೆಹಲಿ ನಡುವೆ ಮತ್ತಷ್ಟು ನೇರ ವಿಮಾನಗಳ ಸಂಚಾರ ಆರಂಭಿಸಲಾಗುವುದು. ಜತೆಗೆ, ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಸಾಕಾರಗೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ ಎಂದರು.
ಬಿಯಾಂಡ್ ಬೆಂಗಳೂರು ತರಹದ ಉಪಕ್ರಮಗಳು ಸ್ವಾಗತಾರ್ಹವಾಗಿದ್ದು, ಇವು ತ್ವರಿತ ಗತಿಯಲ್ಲಿ ನಡೆಯಬೇಕಾಗಿವೆ. ಪ್ರಧಾನಿ ಮೋದಿ 2047ರ ಹೊತ್ತಿಗೆ ದೇಶವು 32 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕೆನ್ನುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದು ಸಾಧ್ಯವಾಗಬೇಕೆಂದರೆ ಅಧಿಕಾರಶಾಹಿಗಳು ಮತ್ತು ಉದ್ಯಮಿಗಳು ತಮ್ಮ ಮನೋಭಾವ ಬದಲಿಸಿಕೊಳ್ಳುವುದು ಅಗತ್ಯವಿದ್ದು, ಬೆಂಗಳೂರಿನ ಮೋಹವನ್ನು ಬಿಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಕೋವಿಡ್-19 ನಂತರ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ನಾವೀಗ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ಹಣದುಬ್ಬರ ನಿಯಂತ್ರಣದಲ್ಲಿದೆ. ಪಿಎಂ ಗತಿಶಕ್ತಿ ಯೋಜನೆಯಡಿ ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಒತ್ತು ಕೊಡಲಾಗಿದ್ದು, ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಒಪ್ಪಿಗೆ ನೀಡಲಾಗಿದೆ. ಈ ವರ್ಷದ ಡಿಸೆಂಬರ್ ಹೊತ್ತಿಗೆ ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಸಂಪೂರ್ಣವಾಗಲಿದೆ ಎಂದು ಅವರು ತಿಳಿಸಿದರು.
*60ಕ್ಕೂ ಹೆಚ್ಚು ಉದ್ಯಮಿಗಳು ಭಾಗಿ*
ಟೆಕ್ಸೆಲರೇಷನ್’ ಸಮಾವೇಶದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ 60ಕ್ಕೂ ಹೆಚ್ಚು ಗಣ್ಯ ಉದ್ಯಮಿಗಳು ಪಾಲ್ಗೊಂಡಿದ್ದರು. ಇವರಲ್ಲಿ ದೇಶಪಾಂಡೆ ಫೌಂಡೇಶನ್ನ ವಿವೇಕ್ ಪವಾರ್ ಮತ್ತು ಸಂತೋಷ್ ಹುರಳಿಕೊಪ್ಪಿ, ಕೆನ್ ಅಗ್ರಿಟೆಕ್ನ ವಿವೇಕ್ ನಾಯಕ್, ಅಯಾನ್ ಐಡಿಯಾದ ಮನೋಹರ್ ಜೋಶಿ, ಸೆನೆಕಾ ಕನ್ಸಲ್ಟಿಂಗ್ನ ರಾಜೇಂದ್ರ ಬೆಳಗಾಂವ್ಕರ್, ಕ್ರೆಡಾಯ್ನ ಚೈತನ್ಯ ಕುಲಕರ್ಣಿ, ಫಿಸಿಕ್ಸ್ ಮೋಟಾರ್ ನ ದೀಪಕ್ ಜಾದವ್, ಧಿಯೋಮಿಕ್ಸ್ನ ಪ್ರಭಾತ್ ಅಗರವಾಲ್, ಬೆಳಗಾಂ ಆಕ್ಸಿಜನ್ ಪ್ರೈ.ಲಿ.ನ ವೆಂಕಟೇಶ್ ಪಾಟೀಲ್, ಇಂಡಿವಿಲೇಜ್ನ ಸ್ಮೀತಾ ಮಾಲಿ ಪಾಟೀಲ್ ಮುಂತಾದವರೆಲ್ಲ ಇದ್ದರು.