ಹೆಲಿಕಾಪ್ಟರ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ಒತ್ತಾಯ
ಧಾರವಾಡ : ಭಾರತೀಯ
ಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಸೇನೆಯ 11 ಜನರು ತಮಿಳುನಾಡಿನ ಕೂನೂರು ಬಳಿ ಹೆಲಿಕ್ಯಾಪ್ಟರ್ ದುರಂತದಲ್ಲಿ ದುರ್ಮರಣ ಅಪ್ಪಿದ ಹಿನ್ನೆಲೆಯಲ್ಲಿ ಧಾರವಾಡದ ಬಾರಾಕೋಟ್ರಿಯ ಶಿವಗಿರಿ ಬಳಿ ನೂರಾರು ಯುವಕರು ಬುಧವಾರ ರಾತ್ರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿ ಮೂಲಕ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅಗಲಿದ ಹಿರಿಯ ಚೇತನಗಳಿಗೆ ಕಂಬನಿ ಮಿಡಿಯಲಾಯಿತು.
ಈ ಸಂದರ್ಭದಲ್ಲಿ ನೆರೆದ ಯುವ ಸಮೂಹ ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ, ಬಿಪಿನ್ ರಾವತ್ ಅವರು ಈ ದೇಶ ಕಂಡ ಅತ್ಯದ್ಭುತ ಸೇನಾ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುವ ಮೂಲಕ ಅಪಾರ ಜನ ಮನ್ನಣೆ ಗಳಿಸಿದ ಹಿರಿಮೆ ಹೊಂದಿದ್ದರು. ಸರ್ಜಿಕಲ್ ಸ್ಟ್ರೈಕ್ ಅನ್ನು ಸಮರ್ಥವಾಗಿ ನಿರ್ವಹಿಸಿ, ರಕ್ಷಣಾ ಪಡೆಗೆ ಗೌರವ ತಂದುಕೊಟ್ಟಿದ್ದರು.
ಬಿಪಿನ್ ರಾವತ್ ಅವರ ತಂದೆ ಕೂಡ ಲೆಪ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುವ ಮೂಲಕ ಸೇನೆಗೆ ಅಪಾರ ಕೊಡುಗೆ ನೀಡಿದ್ದರು.
ಅಂತಹ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕುಟುಂಬ ಸಮೇತ ಪ್ರಯಾಣಿಸುವಾಗ
ಈ ಹೆಲಿಕಾಪ್ಟರ್ ದುರಂತ ಸಂಭವಿಸಿರುವುದು ಹಾಗೂ ಅದರಲ್ಲಿಯ ಹನ್ನೊಂದು ಸೇನಾ ಸಿಬ್ಬಂದಿ ಮರಣವನ್ನಪ್ಪಿರುವುದು ಇಡೀ ಭಾರತೀಯ ಸೇನೆಗೆ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.
ಹತ್ತು ಹಲವು ತಪಾಸಣೆ ನಡೆಸಿ, ಹವಾಮಾನ ವೈಪರೀತ್ಯದ ವರದಿ ಆಧರಿಸಿಯೇ ಪ್ರಯಾಣಿಸುವ ಹೆಲಿಕಾಪ್ಟರ್ ತಮಿಳುನಾಡಿನ ದಟ್ಟಕಾನನದ ನಡುವೆ ಎಕಾಎಕಿ ಪತನಗೊಂಡಿರುವುದು ಇಡೀ ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸುವಂತಾಗಿದೆ.
ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸ್ವಯಂ ಶಕ್ತಿ ಸಮಗ್ರ ಅಭಿವೃದ್ಧಿಯ ಸಂಸ್ಥೆಯ ಅಧ್ಯಕ್ಷ ಶರಣು ಅಂಗಡಿ ಮಾತನಾಡಿ, ದೇಶದ ಜನತೆಗೆ ಹಾಗೂ ವಿಶೇಷವಾಗಿ ಸೇನಾ ಪಡೆಗೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ಆ ಭಗವಂತ ನೀಡಲಿ. ಅವರ ನೋವಿನಲ್ಲಿ 139 ಕೋಟಿ ಜನರು ಭಾಗಿಯಾಗಿದ್ದಾರೆ. ಅವರ ಅಗಲಿಕೆ ಸೇನೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ರಾಹುಲ್ ಮಲ್ಲಿಗ್ವಾಡ್, ರಾಮಲಿಂಗಪ್ಪ ಅಂಗಡಿ, ರವಿ ಶಿಂಧೆ, ಕುಮಾರ ಅಗಸಿಮನಿ, ಪ್ರಶಾಂತ್ ಶೆಟ್ಟಿ, ಶಿವಾಜಿ, ಕೆ ಆರ್ ಧರ್ಮೇಗೌಡ, ಮೋಹನ್ ಹರಪ್ನಳ್ಳಿ, ನಾಗರಾಜ್ ಅಂಗಡಿ, ರಾಚಯ್ಯ ಹಿರೇಮಠ, ಚೇತನ್, ವೀರೇಶ್, ಸಾಯಿ, ಶ್ರವಣ್, ಸಮರ್ಥ
ಸೇರಿದಂತೆ ಹಲವಾರು ಯುವಕರು
ಉಪಸ್ಥಿತರಿದ್ದರು.