ಹೆಣ್ಣಿನ ವ್ಯಾಮೋಹಕ್ಕೆ 41 ಲಕ್ಷ ರೂ. ಕಳೆದುಕೊಂಡ ಯುವಕ
ರಾಮನಗರ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಹೆಚ್ಚಾಗಿದೆ. ಅಮಾಯಕ ಜನರ ದೌರ್ಬಲ್ಯವನ್ನು ತಿಳಿದುಕೊಂಡು ಜಾಲತಾಣದಲ್ಲಿ ವಂಚಿಸುವುದು ಸಾಮಾನ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಖವಾಡ ಧರಿಸಿರುವ ವಂಚಕರಿದ್ದು, ಸ್ವಲ್ಪ ಯಾಮಾರಿದರೂ ಹಣದ ಜತೆಗೆ ಮಾನ-ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಹುಷಾರ್! ಜಾಲತಾಣದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಒಂದೆರೆಡು ಯೋಚಿಸುವುದು ತಂಬಾ ಒಳಿತು. ಇಲ್ಲವಾದರೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.
ಹೆಣ್ಣಿನ ವ್ಯಾಮೋಹಕ್ಕೆ ಬಿದ್ದ ರಾಮನಗರ ಮೂಲದ ಯುವಕನೊಬ್ಬ ಇದೀಗ ಬರೋಬ್ಬರಿ 41 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. ಯುವಕನ ಪೋಟೋ ಹಾಗೂ ಇತರ ಮಾಹಿತಿಯನ್ನು ಪಡೆದುಕೊಂಡ ವಂಚಕರು ಆತನ ಪೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕ ನಕಲಿ ಖಾತೆಗಳಿವೆ. ಒಂದು ವೇಳೆ ನಕಲಿ ಖಾತೆಗಳನ್ನು ಪರಿಶೀಲಿಸದೇ ಅವರು ಕಳುಹಿಸುವ ಫ್ರೆಂಡ್ ರಿಕ್ವೆಸ್ಟ್ಗೆ ಓಕೆ ಎಂದರೆ, ಅಂದಿನಿಂದ ನಿಮಗೆ ಕೇಡುಗಾಲ ಶುರು ಎಂದರ್ಥ. ಅದರಲ್ಲೂ ಕಾಮದ ಭಾವನೆಗಳನ್ನು ಕೆರಳಿಸುವ ಫೇಸ್ಬುಕ್ ಪ್ರೊಫೈಲ್ಗೆ ಮರುಳಾದರೆ ಬದುಕೇ ಬರ್ಬಾದ್ ಆಗಿ ಹೋಗುತ್ತದೆ. ಈಗ ರಾಮನಗರದ ಯುವಕನ ಸ್ಥಿತಿ ಕೂಡ ಅದೇ ಆಗಿದೆ.
ಗೀತಾ ಸೆಕ್ಸಿ ಹೆಸರಿನ ಫೇಸ್ಬುಕ್ ಪ್ರೊಫೈಲ್ನಿಂದ ಯುವಕನಿಗೆ ನಿತಂರವಾಗಿ ಬೆದರಿಕೆ ಹಾಕಲಾಗಿದೆ. ಹುಡುಗಿಯರನ್ನು ಒದಗಿಸುವ ಖಾತೆ ಎಂದು ಹೇಳಿಕೊಂಡಿದ್ದು, ಅದರ ಬಲೆಗೆ ಬಿದ್ದ ಯುವಕ, ಫೋಟೋದಿಂದ ಹಿಡಿದು ತನ್ನೆಲ್ಲ ಮಾಹಿತಿಗಳನ್ನು ಕಳುಹಿಸುಕೊಟ್ಟಿದ್ದಲ್ಲದೆ, ಇದೀಗ ಅವರ ಬೆದರಿಕೆಗೆ ಹೆದರಿ 41 ಲಕ್ಷ ರೂ. ಕಳೆದುಕೊಂಡಿದ್ದಾನೆ.
ಯುವಕನ ಪೋಟವನ್ನು ನಗ್ನ ರೀತಿಯಲ್ಲಿ ಎಡಿಟ್ ಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ರಾಮನಗರದ ಕನಕಪುರ ಮೂಲದ ಯುವಕನಿಗೆ ಗೀತಾ ಸೆಕ್ಸಿ ಎಂಬ ಪ್ರೋಫೈಲ್ನಿಂದ ಮೋಸ ಮಾಡಲಾಗಿದೆ. ಕಳೆದ ಡಿಸೆಂಬರ್ನಿಂದ ನಿರಂತರವಾಗಿ ಬೆದರಿಕೆ ಹಾಕಿದ್ದು. ಹಣ ಪೀಕಿದ್ದಾರೆ. ಈ ಸಂಬಂಧ ರಾಮನಗರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.