ಶಾಸಕ ಪ್ರಸಾದ ಅಬ್ಬಯ್ಯಗೆ ಸವಾಲೆಸೆದ : ವಿಜಯ್ ಗುಂಟ್ರಾಳ್!
ಹುಬ್ಬಳ್ಳಿ
ಹುಬ್ಬಳ್ಳಿ: ಸರ್ಕಾರದ ಯಾವುದೇ ಯೋಜನೆಯ ಬಗ್ಗೆ ಸ್ಪಷ್ಟ ಅರಿವಿರದ ಶಾಸಕ ಪ್ರಸಾದ ಅಬ್ಬಯ್ಯ ಕ್ಷೇತ್ರದಲ್ಲಿ ಜಾರಿಯಾದ ಕೆಲ ಯೋಜನೆಗಳ ಇತಿಹಾಸ ತಿಳಿಯದೇ ಎಲ್ಲವೂ ನಾನೇ ಮಾಡಿದ್ದು, ನನ್ನಿಂದಲೇ ಆಗಿದ್ದು ಎಂಬ ಹಪಾಹಪಿಗೆ ಬಿದ್ದಿರುವುದು ನಾಚಿಕೆಗೇಡು ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಡಲು ಆಗ್ರಹಿಸಿ ಪೌರಕಾರ್ಮಿಕರ ವಿವಿಧ ಸಂಘಟನೆಗಳ ಹಿರಿಯರು ನಿರಂತರ ಹೋರಾಟಗಳ ಪರಿಣಾಮವಾಗಿ ಸನ್ 1981ರಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಆಗಿದೆ. ವಿವಿಧ ಸಂಘಟನೆಗಳ ೪ ದಶಕಗಳ ಹೋರಾಟದ ಫಲವಾಗಿ ನವನಗರದಲ್ಲಿ 122 ಮನೆಗಳು ಹಾಗೂ ಮಂಟೂರ್ ರೋಡನಲ್ಲಿ 320 ಮನೆಗಳು ಪಾಲಿಕೆಯಿಂದ ರಾಜೀವ್‌ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿದೆ ಎಂಬುದು ನಮಗೆಲ್ಲ ತಿಳಿದ ಇತಿಹಾಸವಾಗಿದೆ.
ಪ್ರಸ್ತುತ ಮಂಟೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ಪೌರಕಾರ್ಮಿಕರ ಮನೆಗಳ ಬಗ್ಗೆ ಅಲ್ಲಿ ಆಗಬೇಕಾದ ಸಣ್ಣ ಪುಟ್ಟ ಮಾರ್ಪಾಡುಗಳಿದ್ದರೆ ಪೌರಕಾರ್ಮಿಕರ ಅವಲಂಭಿತರು ಸಮುದಾಯದ ಮುಖಂಡರು, ಸಂಘದ ಮುಖ್ಯಸ್ಥರು ಹಾಗೂ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರುವುದು ಸಹಜ ಕ್ರಿಯೆಯಾಗಿದೆ. ಆದರೆ, ಇದರ ಬಗ್ಗೆ ಸ್ಪಷ್ಟವಾಗಿ ಅರಿಯದ ಶಾಸಕ ಪ್ರಸಾದ ಅಬ್ಬಯ್ಯ ಪ್ರಚಾರದ ಹುಚ್ಚಿಗೆ ಬಿದ್ದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವ ಬಗ್ಗೆ ಮಾಹಿತಿ ತಿಳಿದು ದಿಢೀರ್ ಅಧಿಕಾರಿಗಳ ಸಭೆ ಕರೆದು ಪೌರ ಕಾರ್ಮಿಕರ ಮನೆಗಳ ಯೋಜನೆಯಲ್ಲಿ ಯಾವುದೇ ಮಾರ್ಪಾಡು ಮಾಡಬಾರದು ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ತಾಕೀತು ಮಾಡಿರುವುದು ನೋಡಿದರೆ ಶಾಸಕರಿಗೆ ಯೋಜನೆ ಸಮರ್ಪಕ ಜಾರಿ ಮಾಡುವುದಕ್ಕಿಂತ ಪ್ರಚಾರದ ಹಪಾಹಪಿ ಇರುವುದು ಎದ್ದು ಕಾಣುವಂತಿದೆ.
ಪೌರಕಾರ್ಮಿಕರ ಸಮುದಾಯಕ್ಕೆ ಸಂಬಂದಿಸಿದ ಯೋಜನೆಗಳಿಗೆ ಪೌರ ಕಾರ್ಮಿಕರು ಹಾಗೂ ಸಂಘದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾದ ಶಾಸಕ ಪ್ರಸಾದ್ ಅಬ್ಬಯ್ಯ ಸಮುದಾಯದ ಜೊತೆಗೆ ಚರ್ಚಿಸದೆ ಎಕಪಕ್ಷಿಯ ನಿರ್ದಾರ ತೆಗೆದುಕೊಳ್ಳತ್ತ ಪ್ರತಿ ಬಾರಿ ಎಡವುತ್ತಿದ್ದು, ಇವರ ಎಡವಟ್ಟಿನಿಂದಾಗಿ ಕಳೆದ ಬಾರಿ ಹಜ್ ಭವನ ನಿರ್ಮಾಣ ವಿಷಯದಲ್ಲೂ ಆ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯದೇ ತರಾತುರಿಯಲ್ಲಿ ತೀರ್ಮಾನ ಕೈಗೊಂಡು ತೀವ್ರ ಮುಖಭಂಗಕ್ಕೀಡಾಗಿದ್ದು ಕಣ್ಣ ಮುಂದಿದೆ. ಪೌರ ಕಾರ್ಮಿಕರ ಮನೆಗಳು ನನ್ನ ಕನಸಿನ ಕೂಸು ಎಂದೆನ್ನುವ ಶಾಸಕ ಪ್ರಸಾದ ಅಬ್ಬಯ್ಯ 1981 ರಲ್ಲಿ ಪಾಲಿಕೆಯಲ್ಲಿ ಈ ಬಗ್ಗೆ ಠರಾವು ಪಾಸಾದಾಗ ಅಬ್ಬಯ್ಯ ಎಲ್ಲಿದ್ದರು? ಯಾವ ಸ್ಥಾನಮಾನ ಹೊಂದಿದ್ದರು? ಎಂಬುದನ್ನು ಸ್ಪಷ್ಟಪಡಿಸಲಿ.
ಕರದಾತರ ತೆರಿಗೆ ಹಣದಲ್ಲಿ ನಿರ್ಮಾಣವಾಗುತ್ತಿರುವ ಪೌರಕಾರ್ಮಿಕರ ಮನೆಗಳು ಅಲ್ಲಿ ವಾಸಿಸುವ ಪೌರ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ಸುಸಜ್ಜಿತವಾಗಿರಲಿ ಎಂಬ ಸದುದ್ದೇಶದಿಂದ ಹಲವಾರು ಜನಪ್ರತಿನಿಧಿಗಳು, ಸಂಘದ ಮುಖಂಡರು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅದನ್ನೇ ತಪ್ಪಾಗಿ ತಿಳಿದು ಅಧಿಕಾರಿಗಳ ಮೇಲೆ ಹರಿಹಾಯುವುದು ಶಾಸಕರ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ. ಶಾಸಕ ಪ್ರಸಾದ್ ಅಬ್ಬಯ್ಯ ಜನಗಳ ಸೇವಕರು ಎಂಬುದನ್ನು ಮರೆಯಬಾರದು. ಸರ್ಕಾರದ ಅನುದಾನದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳ ಬಗ್ಗೆ ಮಾತನಾಡುವ ಹಕ್ಕು ಎಲ್ಲರಿಗೂ ಇರುತ್ತದೆ. ಅದು ಯಾರ ಮನೆಯ ಸ್ವತ್ತು ಹಾಗಿರುವುದಿಲ್ಲ ಎಂಬುದು ಶಾಸಕರು ಮೊದಲು ತಿಳಿದುಕೊಳ್ಳಲಿ ಎಂದು ಈ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ ವಿಜಯ್ ಗುಂಟ್ರಾಳ್.