ವಿದ್ಯುತ್ ತಂತಿ ಬಿದ್ದು ಗಾಯಗೊಂಡ ವಿದ್ಯಾರ್ಥಿನಿ
ಬೆಂಗಳೂರು: ಸುದ್ದಗುಂಟೆಪಾಳ್ಯ ಬಳಿಯ ಸೆಂಟ್ ಜೋಸೇಫ್ ಕಾಲೇಜು ಬಳಿ ವಿದ್ಯುತ್ ತಂತಿ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದ್ದವು ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಮೈಕೋ ಲೇಔಟ್ ಸಂಚಾರಿ ಠಾಣೆ ಪೊಲೀಸರು ವಾಟರ್ ಟ್ಯಾಂಕರ್ ಚಾಲಕ ಸುನೀಲ್ ಎಂಬಾತನನ್ನು ಬಂಧಿಸಿದ್ದಾರೆ.
ಸ್ಥಳೀಯ ವ್ಯಕ್ತಿ ದೂರಿನ ಮೇರೆಗೆ ವಾಟರ್ ಟ್ಯಾಂಕರ್ ಚಾಲಕ ಹಾಗೂ ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ವಾಟರ್ ಟ್ಯಾಂಕರ್ ಚಾಲಕ, ಸಿಮೆಂಟ್ ಮಿಕ್ಸರ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.ಮೊದಲು ಸಿಮೆಂಟ್ ಮಿಕ್ಸರ್ ಲಾರಿಗೆ ವಿದ್ಯುತ್ ಕೇಬಲ್ ಸಿಲುಕಿ ಕೆಳಗೆ ಬಂದಿತ್ತು. ನಂತರ ಅದೇ ಮಾರ್ಗವಾಗಿ ಬಂದಿದ್ದ ವಾಟರ್ ಟ್ಯಾಂಕ್ಗೆ ಆ ಕೇಬಲ್ ಸಿಲುಕಿತ್ತು. ಈ ವೇಳೆ ಟ್ಯಾಂಕರ್ ವಿದ್ಯುತ್ ಕಂಬವನ್ನ ಎಳೆದು ಹಾಕಿತ್ತು. ಎಳೆದ ರಬಸಕ್ಕೆ ವಿದ್ಯುತ್ ಕಂಬ ಕೆಳಗೆ ಬಿದ್ದು ಅದರ ತಂತಿ ಯುವತಿ ಮೇಲೆ ಬಿದ್ದಿದೆ. ಈ ಹಿನ್ನಲೆ ವಾಟರ್ ಟ್ಯಾಂಕರ್ ಹಾಗೂ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಚಾಲಕರ ವಿರುದ್ಧ ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ವಾಟರ್ ಟ್ಯಾಂಕರ್ ಚಾಲಕನ ಬಂಧನವಾಗಿದೆ.
ಇನ್ನು ಈ ಘಟನೆ ತನ್ನಿಂದಾದರೂ ಏನು ತಿಳಿಯದಂತೆ ವಾಹನ ನಿಲ್ಲಿಸದೇ ಸ್ಥಳದಿಂದ ಸುನೀಲ್ ತೆರಳಿದ್ದ. ಬಳಿಕ ಪೊಲೀಸರು ಘಟನಾ ಸ್ಥಳ ಪರಿಶೀಲಿಸಿ ಗಾಡಿ ನಂಬರ್ ಪತ್ತೆ ಮಾಡಿ ಆರೋಪಿ ಸುನಿಲ್ನನ್ನು ಬಂಧಿಸಿದ್ದಾರೆ.