ಮಾತೃ ಹೃದಯಿ ಡಾಕ್ಟರ್ : ಶ್ಯಾಮಲಾ ಶೆಟ್ಟರ್
ಧಾರವಾಡ:
ಧಾರವಾಡದ ಸಾಧನಕೇರಿಯಲ್ಲಿ ರಾಷ್ಟ್ರೀಯ ವೈದ್ಯ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಧಾರವಾಡದ ಸಾಧನಕೇರಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತಾರು ವೈದ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಡಾ. ಓಗಿ ಶೆಟ್ಟರ್ ಹಾಗೂ ಡಾ. ಶ್ಯಾಮಲಾ ಶೆಟ್ಟರ್ ದಂಪತಿಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದರು. ದಂಪತಿಗಳಿಬ್ಬರು ತಮ್ಮ ವೈದ್ಯ ಸೇವೆಯ ಸಿಹಿ ಕಹಿ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಂಡಿದ್ದು ವಿಶೇಷ.
ಡಾ. ಶ್ಯಾಮಲಾ ಶೆಟ್ಟರ ಅವರು ಸನ್ಮಾನಿತರ ಪರವಾಗಿ ಮಾತನಾಡಿ ಸಮಾಜದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದ ಕೊಡುಗೆಯನ್ನು ಪ್ರಶಂಸಿದರು. ತಮ್ಮ ವೃತ್ತಿ ಬದುಕಿನಲ್ಲಿ ಕಂಡ ಸಾಕಷ್ಟು ಬಡ ರೋಗಿಗಳ ಸಮಸ್ಯಗಳು ಹಾಗೂ ಕಷ್ಟಗಳ ಕುರಿತು ನೆನೆದು ಭಾವುಕರಾದರು.
ಡಾ.ಶ್ಯಾಮಲಾ ಶೆಟ್ಟರ್ ತಮ್ಮ ಸಾರ್ವಜನಿಕ ವೈದ್ಯ ವೃತ್ತಿಯ 25ನೇ ವಸಂತದಲ್ಲಿರುವುದು ಮತ್ತೊಂದು ವಿಶೇಷ. ಮಾತ್ರವಲ್ಲದೆ ಪ್ರಸ್ತುತ ಅವರು ಕಾರ್ಯನಿರ್ವಹಿಸುತ್ತಿರುವ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 10 ವರ್ಷಗಳ ಸೇವಾ ಅವಧಿಯನ್ನು ಮುಗಿಸಿ ಹನ್ನೊಂದನೆ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಕೊರೋನಾ ಸಾಂಕ್ರಾಮಿಕ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಶ್ಯಾಮಲಾ ಶೆಟ್ಟರ್:
ಕೋವಿಡ್ ಸಾಂಕ್ರಾಮಿಕ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಕೋವಿಡ್ ಅನ್ನು ನಿಯಂತ್ರಿಸುವಲ್ಲಿ ಇವರ ಪಾತ್ರ ಗಣನೀಯವಾಗಿತ್ತು. ಮಾನ್ಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪಿ.ಆರ್ ಹಾವನೂರ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿ ಹಾಗೂ ಕೋವಿಡ್ ಮಾದರಿ ಪರೀಕ್ಷೆ ನಡೆಸುವಲ್ಲಿ ಡಾ ಶ್ಯಾಮಲಾ ಶೆಟ್ಟರ್ ಪ್ರಮುಖ ಪಾತ್ರ ವಹಿಸಿದ್ದರು.ಅಷ್ಟೆ ಅಲ್ಲ ಅವರ ಕಾರ್ಯಕ್ಷಮತೆಗಾಗಿ ಜಿಲ್ಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.