ಬಿಸಿಯೂಟದಿಂದ ವಂಚಿತರಾದ ಸರ್ಕಾರಿ ಶಾಲೆಯ ಮಕ್ಕಳು!
ದಾವಣಗೆರೆ: ಮುಖ್ಯಶಿಕ್ಷಕರ ಬೇಜವಾಬ್ದಾರಿಯಿಂದ ಶಾಲೆ ಮಕ್ಕಳು ಬಿಸಿಯೂಟದಿಂದ ವಂಚಿತರಾಗಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ಆರು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟ ತಯಾರಿಸಿಲ್ಲ.
ಹೀಗಾಗಿ ಶಾಲೆ ಮಕ್ಕಳು ಮನೆಯಿಂದಲೇ ಊಟ ತರುವಂತಾಗಿದೆ. ಕೆಲವೊಮ್ಮೆ ಮಕ್ಕಳೇ ಊಟ ತಯಾರಿಸುತ್ತಿದ್ದಾರೆ.
ಸ್ವಚ್ಛತೆ ಹಾಗೂ ಇತರೆ ವಿಚಾರಕ್ಕೆ ಶಾಲೆಯ ಮುಖ್ಯಶಿಕ್ಷಕರು ಮತ್ತು ಬಿಸಿಯೂಟ ಸಿಬ್ಬಂದಿಯ ನಡುವೆ ಗಲಾಟೆ ನಡೆದಿದೆ. ಇದನ್ನೆ ಮುಂದಿಟ್ಟು ಕೊಂಡ ಅಡುಗೆ ಸಿಬ್ಬಂದಿಗಳು ಕೆಲಸ ಬಿಟ್ಟು ಹೊರಡಿದ್ದಾರೆ. ಹೀಗಾಗಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಸಿಬ್ಬಂದಿ ಕೊರತೆ ಇದೆ ಅಲ್ಲದೆ ಮತ್ತೊಂದೆಡೆ ಮಕ್ಕಳು ಬಿಸಿಯೂಟದಿಂದ ವಂಚಿತರಾಗುತ್ತಿದ್ದಾರೆಂದು ಸ್ಥಳೀಯರು ಹೋರಾಟ ನಡೆಸಿದ್ದರು. ಆಗ ಶಿಕ್ಷಕರೇ ಅಡುಗೆ ಮಾಡಿ ಮಕ್ಕಳಿಗೆ ಊಟ ಬಡಿಸಿದ್ದರು. ಆದ್ರೆ ಈಗ ಮತ್ತೆ ಹಳೆಯ ವ್ಯವಸ್ಥೆಯೇ ಮುಂದುವರೆದಿದೆ.
ಕಳೆದ ಆರು ತಿಂಗಳಿನಿಂದ ಮಕ್ಕಳಿಗೆ ಊಟ ನೀಡದೇ ಬೇಜವಾಬ್ದಾರಿಯಿಂದ ವರ್ತಿಸಿದ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.