ಡಿಮ್ಹಾನ್ಸ್ ನಿರ್ದೇಶಕ ಹಾಗೂ ವೈದ್ಯನ ಮೇಲೆ ಅಟ್ರಾಸಿಟಿ ಕೇಸ್ ದಾಖಲು
ಧಾರವಾಡ
ಧಾರವಾಡ ಡಿಮಾನ್ಸ್ ನಿರ್ದೇಶಕ ಮಹೇಶ ದೇಸಾಯಿ ಮೇಲೆ ದೂರು ದಾಖಲು ಆಗಿದೆ.
ಧಾರವಾಡದ ಪ್ರತಿಷ್ಠಿತ ಡಿಮಾನ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ಇದರ ನಿರ್ದೇಶಕ ಡಾ.ಮಹೇಶ ದೇಸಾಯಿ ಹಾಗೂ ಇನ್ನೊಬ್ಬ ವೈದ್ಯರ ಮೇಲೆ ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ದೂರು ದಾಖಲಾಗಿದೆ.
ಡಿಮಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಹ ವೈದ್ಯ ಡಾ.ರಮೇಶ ಬಾಬು ಎಂಬುವವರು ದೂರು ದಾಖಲಿಸಿದ್ದಾರೆ. ಡಾ.ಮಹೇಶ ದೇಸಾಯಿ ಅವರು, ತಮಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ತಮ್ಮ ವೇತನವನ್ನೂ ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆ. ನಾನು ಪರಿಶಿಷ್ಟ ಜಾತಿಯವನಾಗಿದ್ದರಿಂದ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಹಾಜರಾತಿ ಇದ್ದರೂ ಗೈರು ಹಾಜರಿ ಎಂದು ತೋರಿಸಿ ನನ್ನ ವೇತನವನ್ನು ತಡೆಹಿಡಿದಿದ್ದಾರೆ ಎಂದು ಡಾ.ರಮೇಶ ಬಾಬು ಆರೋಪಿಸಿದ್ದಾರೆ.
ಡಾ.ಮಹೇಶ ದೇಸಾಯಿ ಅವರ ಜೊತೆಗೂ ರಾಘವೇಂದ್ರ ನಾಯಕ ಎನ್ನುವವರು ತಮಗೆ ಕಿರುಕುಳ ನೀಡಿದ್ದಾರೆ ಎಂದು ರಮೇಶ ಬಾಬು ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಯಚೂರು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಸ್ಥಳದ ಪಂಚನಾಮೆ ಮಾಡಿಕೊಂಡು ಹೋಗಿ, ತನಿಖೆ ನಡೆಸುತ್ತಿದ್ದಾರೆ.