ಕುಂಟೋಜಿ ಗ್ರಾ.ಪಂ.ಗೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ
ಗಜೇಂದ್ರಗಡ: ಕುಂಟೋಜಿ ಗ್ರಾಮ ಪಂಚಾಯತಿಯ ಆರು ಹಳ್ಳಿಗಳಲ್ಲಿ ಪ್ರತಿ ಒಂದರಂತೆ ಬೂದು ನೀರು ನಿರ್ವಹಣೆ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕು ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಡಿ ಮೋಹನ್ ತಿಳಿಸಿದರು.
ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ವೀಕ್ಷಣೆ ಮಾಡಿ ಅವರು ಮಾತನಾಡಿದರು.ಬೂದು ನೀರು ನಿರ್ವಹಣೆ ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು. ಯಾವುದೇ ಕಾರಣಕ್ಕೂ ತಡ ಮಾಡಬಾರದು ಎಂದು ಪಿಡಿಒ ಹಾಗೂ ಟಿಎಇಗೆ ತಿಳಿಸಿದರು.
ನಂತರ ಗ್ರಾಮ ಪಂಚಾಯತಿಯಲ್ಲಿ ಪೈಲ್ ಗಳನ್ನು ಪರಿಶೀಲಿಸಿದರು. ನಂತರ ಬೂದು ನೀರು ನಿರ್ವಹಣೆ ಕಾಮಗಾರಿ ಸೂಕ್ತ ಸ್ಥಳ ಪರಿಶೀಲಿಸಿ ಕಾಮಗಾರಿ ಪ್ರಾರಂಬಿಸುವಂತೆ ಸೂಚಿಸಿದರು.ಗ್ರಂಥಾಲಯ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಗ್ರಂಥಾಲಯ ಅಭಿವೃದ್ಧಿ ಪಡಿಸುವಂತೆ ಪಿಡಿಒಗೆ ತಿಳಿಸಿದರು. ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಬಾಸ್ಕೇಟ್ ಬಾಲ್ ಮೈದಾನ, ಶೌಚಾಲಯ, ಅಡುಗೆ ಕೋಣೆ ವೀಕ್ಷಣೆ ಮಾಡಿದರು. ಮಕ್ಕಳ ಹಾಜರಾತಿ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿದರು. ಮಕ್ಕಳ ಕಲಿಕಾ ಗುಣಮಟ್ಟದ ಮಾಹಿತಿ ಪಡೆದರು. ಶಾಲಾ ಮೈದಾನದಲ್ಲಿ ನರೇಗಾ ಯೋಜನೆಯಡಿ ಉದ್ಯಾನವನ ಬೆಳೆಸಲು ಟಿಎಇಗೆ ಸೂಚಿಸಿದರು.
ನಂತರ ವದೇಗೋಳ, ಜೀಗೇರಿ ಗ್ರಾಮಕ್ಕೆ ಭೇಟಿ ನೀಡಿ ಬೂದು ನೀರು ನಿರ್ವಹಣೆ ಕಾಮಗಾರಿ ಸ್ಥಳ ಪರಿಶೀಲಿಸಿದರು. ನಂತರ ಜೀಗೇರಿ ಗ್ರಾಮದ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿ ಘಟಕ ಪರಿಶೀಲಿಸಿದರು.
ಶಾಲೆಯಲ್ಲಿ ಇಡ್ಲಿ ಸವಿದ ಇಒ
ಕುಂಟೋಜಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಶೌಚಾಲಯ ಶಾಲಾ ಕೊಠಡಿ ಮತ್ತು ಅಂಗನವಾಡಿ ಕೇಂದ್ರ ಮಕ್ಕಳ ಬಿಸಿಯೂಟದ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು.ಈ ಶಾಲೆಯಲ್ಲಿ ತಿಂಗಳ ಮೊದಲನೇ ಶನಿವಾರ ವಿಶೇಷವಾಗಿ ಇಡ್ಲಿ ಸಾಂಬಾರ ತಯಾರಿಸಿ ಮಕ್ಕಳಿಗೆ ಉಪಹಾರ ನೀಡುತ್ತಿರುವುದು ವಿಶೇಷ ಗಮನ ಸೆಳೆಯಿತು. ಈ ವೇಳೆ ಮಾನ್ಯ ಕಾರ್ಯನಿರ್ವಾಹಕಅಧಿಕಾರಿಗಳು ಇಡ್ಲಿ ಸಾಂಬಾರು ಸವಿದು ಶಾಲಾ ಶಿಕ್ಷಕರಿಗೆ ಹಾಗೂ ಅಡುಗೆ ಸಿಬ್ಬಂದಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗನವಾಡಿ ಮಕ್ಕಳಿಂದ ಹಾಡು
ಜೀಗೇರಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಮಾನ್ಯ ಕಾರ್ಯನಿರ್ವಾಹಕಅಧಿಕಾರಿಗಳು ಮಕ್ಕಳ ಹಾಜರಾತಿ ಪರಿಶೀಲಸಿದರು. ನಂತರ ಮಕ್ಕಳಿಂದ ದಾರಿಯಲ್ಲಿ ಹೋಗುವಾಗ ಒಬ್ಬ ಹುಡುಗ ಬಂದ ಹಿಂಗ ಅಂದ್ರು.. ಎಂಬ ಹಾಡು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪಿಡಿಒ ಮಹಾಂತೇಶ ತಳವಾರ, ಟಿಸಿ ಪ್ರಿಯಾಂಕಾ ಅಂಗಡಿ, ಟಿಐಇಸಿ ಮಂಜುನಾಥ ಹಳ್ಳದ, ಪ್ರವೀಣ ದೂಳಣ್ಣನವರ, ಗ್ರಾ.ಪಂ. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಂಚಾಯತ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಇದ್ದರು.