ಚಿತ್ರದುರ್ಗ

ಮಗಳಿಗೆ ತಾಯಿಯ ಯಕೃತ್ ಕಸಿ: ಅರ್ಥಿಕ ನೆರವಿತ್ತು ಆಶೀರ್ವದಿಸಿದ ತರಳಬಾಳು ಶ್ರೀ ಜಗದ್ಗುರುಗಳಿಗೆ ತಾಯಿ ಮಗವಿನ ಧನ್ಯತಾ ನಮನ

ಚಿತ್ರದುರ್ಗ

ದೇಹದಲ್ಲಿ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ, ಗ್ಲೈಕೋಜನ್‌ ಸಂಗ್ರಹಣೆ, ಕೆಂಪು ರಕ್ತಕಣಗಳ ವಿಭಜನೆ, ಪ್ಲಾಸ್ಮ ಪ್ರೋಟೀನ್‌ ಸಂಶ್ಲೇಷಣೆ, ಹಾರ್ಮೋನ್ ಉತ್ಪಾದನೆಯಂತಹ ಪ್ರಮುಖ ಕಾರ್ಯ ನಿರ್ವಹಿಸುವ ಅಂಗ ಯಕೃತ್ . ಇದು ತೊಂದರೆಗೊಳಗಾದರೆ ಜೀವಕ್ಕೆ ಅಪಾಯ. ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿಗಳಷ್ಟು ವೆಚ್ಚ. ಅಲ್ಲದೆ ಕಸಿ ಮಾಡಲು ಬೇರೊಬ್ಬರ ಯಕೃತ್ತಿನ ಭಾಗವು ಬೇಕು.

ಇಂತಹ ದುಬಾರಿ ಚಿಕಿತ್ಸೆ ಮಾಡಿಸಲು ಸಾಮಾನ್ಯ ವರ್ಗದ ಕುಟುಂಬದವರಿಗೆ ಕಷ್ಟಸಾಧ್ಯ. ಇಂತಹ ತೊಂದರೆ ಕಾಣಿಸಿಕೊಂಡಿದ್ದು ಚನ್ನಗಿರಿಯ ಬಡ ಮಧ್ಯಮ ವರ್ಗದ ದೀಕ್ಷಾ ಎಂಬ ಎಂಟು ವರ್ಷದ ಮಗುವಿಗೆ. ಈ ವಿಷಯ ತಿಳಿದ ಆ ಮಗುವಿನ ತಾಯಿಯೇ ತನ್ನ ಯಕೃತ್ತಿನ ಭಾಗ ಕಸಿಮಾಡಿಸಲು ಮುಂದಾದರೂ ಆರ್ಥಿಕ ಸಮಸ್ಯೆಯಿಂದ ಕಂಗಾಲಾಗುತ್ತಾಳೆ. ಈ ಸಮಸ್ಯೆ ಗಮನಕ್ಕೆ ಬಂದಿದ್ದೇ ತಡ ಮಾನವೀಯತೆಯ ಮಹಾಗುರುವೆಂದೇ ಜನಮನದಿ ಆರಾಧಿಸಲ್ಪಡುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಶ್ರೀ ಬೃಹನ್ಮಠದಿಂದ ಭರಿಸಿ ಆಸರೆಯಾಗಿರುತ್ತಾರೆ.

ಚನ್ನಗಿರಿ ತರಳಬಾಳು ಶಾಲೆಯ ಎರಡನೆಯ ತರಗತಿಯಲ್ಲಿ ಓದುತ್ತಿರುವ ಪಿ.ಎಸ್ ದೀಕ್ಷಾಗೆ ಕೆಲ ದಿನಗಳ ಹಿಂದೆ ರಕ್ತಸ್ರಾವವಾಗುತಿತ್ತು. ಚಿಕಿತ್ಸೆಗಾಗಿ ಪೋಷಕರಾದ ಪ್ರಸನ್ನಕುಮಾರ್ ಮತ್ತು ಶ್ರುತಿ ಶಿವಮೊಗ್ಗ ನಗರದ ಆಸ್ಪತ್ರೆಗೆ ಹೋದರು. ಆಸ್ಪತ್ರೆಯ ವೈದ್ಯರು ಮಗುವನ್ನು ಪರೀಕ್ಷಿಸಿ, ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡುತ್ತಾರೆ. ಆಗ ಪೋಷಕರು ಬೆಂಗಳೂರಿನ ಆಸ್ಟರ್ ಸಿ.ಎಂ. ಐ ಆಸ್ಪತ್ರೆಗೆ ಸೇರಿಸಿದರು. ‌ಅಲ್ಲಿನ ತಜ್ಞ ವೈದ್ಯರು ತಪಾಸಣೆ ಮಾಡಿ “ಯಕೃತ್ ತೊಂದರೆಯಲ್ಲಿದೆ; ಶಸ್ತ್ರ ಚಿಕಿತ್ಸೆ ಮಾಡಬೇಕು. ಇದಕ್ಕೆ ಬೇರೆಯವರ ಯಕೃತ್ತನ್ನು ಕಸಿ ಮಾಡಿ ಜೋಡಿಸಬಹುದು” ಎಂಬ ಸಲಹೆ ನೀಡಿದರು. ಆಗ ಮಗುವಿನ ತಾಯಿ ಶ್ರುತಿ ತನ್ನ ಕರುಳಿನ ಕುಡಿಗೆ ತನ್ನದೇ ಯಕೃತ್ತನ್ನು ಕಸಿ ಮಾಡಿಸಲು ಮುಂದೆ ಬರುತ್ತಾಳೆ. ತಾಯಿ ಮಗುವಿಗೆ ಜನ್ಮ ನೀಡಿದ ಕ್ಷಣ ಕರುಳಬಳ್ಳಿಯನ್ನು ಕತ್ತರಿಸುವುದು ವಾಡಿಕೆ. ಆದರೆ ಇಲ್ಲಿ ತನ್ನ ಮಗುವಿಗೆ ಮತ್ತೊಮ್ಮೆ ಕರುಳಬಳ್ಳಿ ಬೆಸೆಯುವ ಅಪರೂಪದ ಸಂದರ್ಭ ಇದು.

ಮಗುವಿನ ತಂದೆ ಪ್ರಸನ್ನ ಕುಮಾರ್ ವೃತ್ತಿಯಲ್ಲಿ ಚನ್ನಗಿರಿ ತರಳಬಾಳು ಶಾಲೆಯ ಬಸ್ ಚಾಲಕ. ಈತ ತನ್ನ ಪತ್ನಿಯೊಂದಿಗೆ ಸಿರಿಗೆರೆಗೆ ಆಗಮಿಸಿ ಪೂಜ್ಯರ ಬಳಿ ತಮ್ಮ ಮಗುವಿನ ಇತಿವೃತ್ತವನ್ನೆಲ್ಲ ನಿವೇದಿಸಿಕೊಂಡರು. ಮಗುವಿನ ಕರುಣಾಜನಕ ಕಥೆಯನ್ನು ಆಲಿಸಿದ ಶ್ರೀಜಗದ್ಗುರುಗಳು ತಕ್ಷಣ ಚಿಕಿತ್ಸೆಯ ವೆಚ್ಚಕ್ಕೆ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿ, ತಾಯಿ ಮಗುವಿನ ಆರೋಗ್ಯಕ್ಕೆ ಶುಭ ಕೋರಿದರು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶ್ರೀ ಜಗದ್ಗುರುಗಳವರ ಸಲಹೆಯಂತೆ ಮುಖ್ಯಮಂತ್ರಿಗಳ ನಿಧಿಯಿಂದ ಮೂರು ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ತೋರಿದರು.

ಈಗ ದೀಕ್ಷಾಳ ಆರೋಗ್ಯ ಸುಧಾರಣೆಯಾಗಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದಾಳೆ. ತಾಯಿ ಶ್ರುತಿಯು ಸಹ ಆರೋಗ್ಯವಾಗಿದ್ದಾಳೆ. ತಂದೆ ಪ್ರಸನ್ನಕುಮಾರ್ ತರಳಬಾಳು ಶ್ರೀಜಗದ್ಗುರುಗಳ ಸಕಾಲಿಕ ನೆರವು, ಮಾರ್ಗದರ್ಶನದಿಂದ ಎದುರಾಗಿದ್ದ ಬೆಟ್ಟದಂತಹ ಕಷ್ಟ ಕರಗಿತು ಎಂದು ಪೂಜ್ಯರ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಕೊರೊನಾ ಅವಧಿಯಲ್ಲಿ ರಾಜ್ಯದ ಹತ್ತಾರು ನಗರಗಳಲ್ಲಿ ಕೋಟಿ ರೂಗಳ ವೆಚ್ಚದಲ್ಲಿ ಅಗತ್ಯವಿರುವವರಿಗೆ ಆಹಾರ ಪೂರೈಕೆ ಮಾಡಿದ್ದ ಪೂಜ್ಯರು, ನೂರಾರು ಸೋಂಕಿತರಿಗೆ ಹಗಲಿರುಳು ಮಾರ್ಗದರ್ಶನ ಮತ್ತು ಆಸ್ಪತ್ರೆ ವ್ಯವಸ್ಥೆ, ವೆಂಟಿಲೇಟರ್ ಸೇರಿದಂತೆ ತುರ್ತು ಅವಶ್ಯಕತೆಗಳನ್ನು ಕಲ್ಪಿಸುವಲ್ಲಿ ತರಳಬಾಳು ಶ್ರೀ ಜಗದ್ಗುರುಗಳವರ ಶ್ರಮ ಅಪಾರವಾದದುದು. ಕೊರೊನಾ ಸೋಂಕಿತರಾಗಿ ಸಾವಿನ ದವಡೆಯಲ್ಲಿದ್ದ ಹಲವಾರು ಮಂದಿ ಶ್ರೀ ಜಗದ್ಗುರುಗಳವರು ನೀಡಿದ ಧೈರ್ಯ ಮತ್ತು ಮಾರ್ಗದರ್ಶನದ ಫಲವಾಗಿ ಆರೋಗ್ಯ ಪೂರ್ಣರಾಗಿ ವೆಂಟಿಲೇಟರ್ ನಿಂದ ಬಿಡುಗಡೆ ಹೊಂದಿದ ಹಲವಾರು ಉದಾಹರಣೆಗಳನ್ನು ಇಲ್ಲಿ ಸ್ಮರಿಸಬಹುದು.

Related Articles

Leave a Reply

Your email address will not be published. Required fields are marked *

Back to top button