ಎಸ್ ಡಿ ಎಂ ಮೆಡಿಕಲ್ ಕಾಲೇಜು ಕೋವಿಡ್ ನಿಯಂತ್ರಣಕ್ಕೆ ವ್ಯಾಪಕ ಕ್ರಮ
ಧಾರವಾಡ
ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ.ಮೊದಲು ಸೋಂಕಿತರಾದವರ ಟ್ರಾವೆಲ್ ಹಿಸ್ಟರಿ,ಜಿನೋಮ್ ಸಿಕ್ವೆನ್ಸಿ ಪರಿಶೀಲಿಸಲಾಗುತ್ತಿದೆ.ಮುಂಜಾಗ್ರತಾ ಕ್ರಮವಾಗಿ ಎಸ್ ಡಿ ಎಂ ಗೆ ಸಾರ್ವಜನಿಕರ ಅನಗತ್ಯ ಭೇಟಿ ಹಾಗೂ ರೋಗಿಗಳ ಸಹಾಯಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಸ್‌ಡಿಎಂ ಸುತ್ತಲಿನ 500 ಮೀಟರ್ ಪ್ರದೇಶದ ಶಾಲೆ ಕಾಲೇಜುಗಳಿಗೆ ಇಂದು ಶುಕ್ರವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.
ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ( ಎಸ್‌ಡಿಎಂ) ಆವರಣದಲ್ಲಿ ಈಗಾಗಲೇ 1 ಸಾವಿರ ಜನರನ್ನು ಕೋವಿಡ್ ತಪಾಸಣೆ ಮಾಡಲಾಗಿದೆ ಮೊದಲು 66 ,ನಂತರ 116 ಸೇರಿ ಇದುವರೆಗೆ ಒಟ್ಟು 182 ಜನರಲ್ಲಿ ಸೋಂಕು ದೃಢಪಟ್ಟಿದೆ. ಸಂಸ್ಥೆಯ ವಿದ್ಯಾರ್ಥಿಗಳು,ಸಿಬ್ಬಂದಿ ಸೇರಿ ಸುಮಾರು 3,500 ಜನ ಇಲ್ಲಿದ್ದಾರೆ. ಹುಬ್ಬಳ್ಳಿಯಿಂದ ಹೆಚ್ಚಿನ ತಂಡಗಳನ್ನು ಕರೆಯಿಸಿ ಸ್ವ್ಯಾಬ್ ಸಂಗ್ರಹಿಸಲಾಗುತ್ತಿದೆ. ಡಿಮ್ಹಾನ್ಸ್,ಕಿಮ್ಸ್ ಹಾಗೂ ಎಸ್‌ಡಿಎಂ ಪ್ರಯೋಗಾಲಯಗಳನ್ನು ಸಂಗ್ರಹಿತ ಮಾದರಿಗಳ ವರದಿ ಪಡೆಯಲಾಗುವುದು.ಎಲ್ಲ ವರದಿಗಳು ಇಂದು ಮಧ್ಯರಾತ್ರಿ ಅಥವಾ ನಾಳೆ ಬೆಳಿಗ್ಗೆ ಹೊತ್ತಿಗೆ ಲಭ್ಯವಾಗಬಹುದು.
ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮ ಜಾರಿಗೊಳಿಸಲಾಗಿದೆ.ಮೊದಲು ಸೋಂಕಿತರಾದವರ ಟ್ರಾವೆಲ್ ಹಿಸ್ಟರಿ ಹಾಗೂ ಜಿನೋಮ್ ಸಿಕ್ವೆನ್ಸಿ ಪರಿಶೀಲಿಸಲಾಗುವುದು.ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ನಾನಾ ಕಡೆಯಿಂದ ಬಂದವರಿರುತ್ತಾರೆ . ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಎಂ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯೊಳಗಿನ ಶಾಲೆ ಕಾಲೇಜುಗಳಿಗೆ ಇಂದು ಶುಕ್ರವಾರ ನ.26 ರಂದು ರಜೆ ಘೋಷಿಸಲಾಗಿದೆ ಎಂದರು.
ಕಾಲೇಜಿನ ಆವರಣದ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನ.17 ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮ ,ನ.19 ರಂದು ನಡೆದ ಮದುವೆ ಸಮಾರಂಭ ಹಾಗೂ ನಿನ್ನೆ ನ.25 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡವರೆಲ್ಲರೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಸೋಂಕಿತರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕ ಹೊಂದಿದ ವ್ಯಕ್ತಿಗಳೂ ಕೂಡ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಲಾಗಿದೆ.
ಸೋಂಕಿತರು ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ.ತೀವ್ರತರ ಲಕ್ಷಣಗಳಿಲ್ಲ.ಉತ್ತಮ ಚಿಕಿತ್ಸೆ,ಔಷಧೋಪಚಾರ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.