ಎಳೆಯ ವಯಸ್ಸಿನಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ ವಿಶ್ವಕೀರ್ತಿ!
ಹುಬ್ಬಳ್ಳಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತು ಅಕ್ಷರಶಃ ಸತ್ಯ. ಬೆಳೆಯುವ ಪ್ರತಿಭೆಗೆ ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬುವಂತೆ. ಹುಬ್ಬಳ್ಳಿ ಬಾಲಕಿಯೊಬ್ಬಳು ವಯಸ್ಸಿಗೂ ಮೀರಿದ ಸಾಧನೆ ಮಾಡುವ ಮೂಲಕ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ಆರನೇ ವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನ ಹೊಂದಿರುವ ಹುಬ್ಬಳ್ಳಿಯ ಹುಡುಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾಳೆ. ಹಾಗಿದ್ದರೇ ಏನಿದು ಸಾಧನೆ ಅಂತೀರಾ ತೋರಿಸ್ತಿವಿ ನೋಡಿ..ಹೀಗೆ ಸಾಲು ಸಾಲು ನೂರಾರು ಪ್ರಶ್ನೆಗಳಿಗೆ ಅಳ್ಳು ಹುರಿದಂತೆ ಉತ್ತರ ಕೊಡುತ್ತಿರುವ ಈಕೆ ವಿಶ್ವಕೀರ್ತಿ ಗಣೇಶ ಕಾಂಬಳೆ. ಆರು ವರ್ಷದ ಈ ಬಾಲಕಿ ನೂರಾರು ಸಾಮಾನ್ಯ ಜ್ಞಾನ, ವಿಜ್ಞಾನ, ಗಣಿತ, ಸಮಾಜಶಾಸ್ತ್ರದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ಹೌದು..
ಹುಬ್ಬಳ್ಳಿಯ ವಿದ್ಯಾನಗರ ನೇಕಾರ ಕಾಲೋನಿಯ ನಿವಾಸಿಯಾಗಿರುವ ಗಣೇಶ ಕಾಂಬಳೆ ಹಾಗೂ ಶಿಲ್ಪಾ ಕಾಂಬಳೆಯವರ ಮಗಳು. ಈಗ ತಾನೇ ಒಂದನೇ ಕ್ಲಾಸ್ ಮೆಟ್ಟಿಲು ಏರಬೇಕಿರುವ ಬಾಲಕಿ ತನ್ನಲ್ಲಿರುವ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿ ಹೆತ್ತವರಿಗೆ ಮಾತ್ರವಲ್ಲದೆ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಇನ್ನೂ ಒಂದನೇ ವರ್ಷದವಳಿದ್ದಾಗಲೇ ಓದುವ ಆಸಕ್ತಿಯನ್ನು ಗಮನಿಸಿದ ಹೆತ್ತವರು ಸೂಕ್ತ ತರಬೇತಿ ನೀಡುವ ಮೂಲಕ ಬಾಲಕಿಯ ಪ್ರತಿಭೆ ಅನಾವರಣಕ್ಕೆ ಮುಂದಾಗಿದ್ದಾರೆ. ಸುಮಾರು 300 ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ಉತ್ತರಿಸುವ ಈಕೆ. 3 ನಿಮಿಷ 41 ಸೆಕೆಂಡ್ ನಲ್ಲಿ ಒಂದು ನೂರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾಳೆ.
ಅಲ್ಲದೇ 30 ಶ್ಲೋಕಗಳನ್ನು ನಿರರ್ಗಳವಾಗಿ ಹೇಳುವ ಬಾಲಕಿ, ವಿಶ್ವಕ್ಕೆ ಸಂಬಂಧಪಟ್ಟ, ಸಮಾಜಶಾಸ್ತ್ರ, ವಿಜ್ಞಾನ ಸಂಕೇತ, ಕನ್ನಡ ವ್ಯಾಕರಣದಲ್ಲಿಯೂ ಕೂಡ ಪರಿಣಿತಿ ಹೊಂದಿರುವುದು ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದು, ಹೆತ್ತವರ ಖುಷಿಯನ್ನು ಇಮ್ಮಡಿಗೊಳಿಸಿದೆ.
ಒಟ್ಟಿನಲ್ಲಿ ವಿಶ್ವಕೀರ್ತಿಯ ಸಾಧನೆಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ತೊದಲು ನುಡಿಯಲ್ಲಿಯೇ ಐಎಎಸ್ ಕನಸನ್ನು ಕಂಡಿರುವ ಬಾಲ ಪ್ರತಿಭೆ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿದೆ. ಯಾವುದೇ ವಿಷಯವಿದ್ದರೂ ಓದಬೇಕು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಹೆಬ್ಬಯಕೆ ಹೊಂದಿರುವ ಬಾಲಕಿಯ ಕೀರ್ತಿ ಜಗತ್ತಿನಾದ್ಯಂತ ವ್ಯಾಪಿಸಲಿ