ರಾಜ್ಯ

ಆತ್ಮ ಸಮರ್ಪಣೆಯ ಭಕ್ತಿಯಿಂದ ಮಾತ್ರ ಭಕ್ತರಿಗೆ ಭಗವಂತನ ಸೌಭಾಗ್ಯ : ತರಳಬಾಳು ಶ್ರೀ ಜಗದ್ಗುರುಗಳವರ ಅಭಿಮತ

ಚಿಕ್ಕಮಗಳೂರು -ತರೀಕೆರೆ

ದೇವಸ್ಥಾನಗಳಿಗೆ ಬರುವ ಭಕ್ತರು ದೇವರಲ್ಲಿ ಯಾವುದೇ ಬೇಡಿಕೆ ಇಡದೆ ಆತ್ಮ ಸಮರ್ಪಣೆ ಮಾಡಿಕೊಂಡಾಗ ಭಕ್ತರಿಗೆ ನೀಡಬೇಕಾದ ಎಲ್ಲ ಸೌಭಾಗ್ಯಗಳನ್ನು ಭಗವಂತ ನೀಡುತ್ತಾನೆ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.

ನಿಸರ್ಗ ಸೌಂದರ್ಯವೇ ಖನಿಯಾಗಿ ನೆಲೆಸಿರುವ ಕಲ್ಲತ್ತಿಗಿರಾಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕಾರ್ತಿಕ ಮಾಸದ ಪೂಜಾ ವಿಧಿ ವಿಧಾನಗಳಲ್ಲಿ ಪಾವನ ಸಾನಿಧ್ಯ ಕರುಣಿಸಿ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ದಯಪಾಲಿಸಿದ ಪೂಜ್ಯರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿರುವ ಕಲ್ಲತ್ತಗಿರಿ, ಗಿರಿಪರ್ವತ ಶ್ರೇಣಿಗೆ ಸೇರಿದ ಸಮುದ್ರಮಟ್ಟದಿಂದ ೧೮೭೬ಮೀ ಎತ್ತರವಾಗಿರುವ ಮನಮೋಹಕ ಪ್ರಕೃತಿ ಸೌಂದರ್ಯದಿಂದಲೂ ಆಹ್ಲಾದಮಯ ಹವಾ ಗುಣದಿಂದಲೂ ಕೂಡಿರುವ ಗಿರಿಯ ನೆತ್ತಿಯ ಮೇಲೆ ಸುಂದರ ಜಲಪಾತವು ಆಳಕ್ಕೆ ಧುಮುಕುತ್ತಿದ್ದು ತನ್ನ ಪ್ರಕೃತಿ ಸಹಜ ದೃಶ್ಯದಿಂದ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ ಎಂದರು.

ಪೂರ್ವದಲ್ಲಿ ಕಲ್ಲತ್ತಗಿರಿ ಪ್ರದೇಶವು ಅಗಸ್ತ್ಯ ಋಷಿಯ ಆಶ್ರಮಗಳಲ್ಲಿ ಒಂದಾಗಿತ್ತೆಂದು ಪ್ರತೀತಿ ಇದೆ. ಇಲ್ಲಿ ಎರಡು ಬಂಡೆಗಳ ನಡುವೆ ನಿರ್ಮಾಣಗೊಂಡಿರುವ ವೀರಭದ್ರನ ದೇವಾಲಯವನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ಹೊರಗಿನಿಂದ ಇದೊಂದು ಗುಹಾದೇವಾಲಯದಂತಿದ್ದು ಇದರ ಮುಂಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ಮೂರು ಆನೆಗಳ ಚಿತ್ರಗಳು ಮನಮೋಹಕವಾಗಿವೆ, ಇವುಗಳ ನೆತ್ತಿಯ ಮೇಲಿನಿಂದ ಜಲಪಾತದ ನೀರಿಗೆ ದೈವೀಸ್ಥಾನವಿದೆ ಎಂದರು.


ಕಳೆದ ಮೂರು ವರ್ಷಗಳಿಂದ ಕಾರ್ತಿಕ ಮಾಸದ ಕಾರ್ಯಕ್ರಮಕ್ಕೆ ಕಲ್ಲತ್ತಿಗಿರಿ ಬರುತ್ತಿದ್ದೇವೆ. ಮೊದಲ. ಕಾರ್ತಿಕ ಮಾಸದ ಪೂಜಾ ಕಾರ್ಯಕ್ರಮಕ್ಕೆ ಬಂದಾಗ ಜಲಪಾತದಲ್ಲಿ ನೀರಿನ ಹರಿವು ಇಲ್ಲದ ಕಾರಣ ಕಾರ್ತಿಕ ಕಾರ್ಯಕ್ರಮಕ್ಕೆ ಪೈಪುಗಳ ಮೂಲಕ ನೀರನ್ನು ಹರಿಸುವಂತಾಯಿತು. ಅನಂತರದ ವರ್ಷಗಳಲ್ಲಿ ಜಲಪಾತದಲ್ಲಿ ನೀರು ತುಂಬಿ ಹರಿಯುತ್ತಿರುವುದು, ಈ ಜಲದಲ್ಲಿ ಕೆಲಹೊತ್ತು ಕಳೆದು, ವಾನರಿರಿಗೆ ಹಣ್ಣು ತಿನ್ನಿಸಿದ್ದು, ತುಂಬಾ ಆನಂದ ಉಂಟುಮಾಡಿದೆ ಎಂದರು.

ಕೆರೆ ನಿರ್ಮಿಸಲು ಕರೆ:

ಸರ್ಕಾರಗಳು ಹಣೆಕಟ್ಟು ಯೋಜನೆಗಳನ್ನು ಜಾರಿಗೊಳಿಸುವುದರಿಂದ ಭೂಸ್ವಾಧೀನ, ಓಕ್ಕಲೆಬ್ಬಿಸುವುದು, ಸ್ಥಳಾಂತರ, ಪರಿಹಾರ ವಿತರಣೆ ಹೀಗೆ ಹತ್ತಾರು ಸಮಸ್ಯೆಗಳು ಉದ್ಭವಿಸುವವು.ಅದರ ಬದಲು ಪ್ರತಿ ಹಳ್ಳಿ ಮತ್ತು ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಿಸುವುದು ಈಗಾಗಲೇ ಇರುವ ಕೆರೆಗಳಿಗೆ ನೀರು ಹರಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರೆ ಈ ಯೋಜನೆಗೆ ಬಳಕೆಯಾಗುವ ಹಣದ ಹತ್ತರಷ್ಟನ್ನು ನಮ್ಮ ರೈತರು ಕೆಲವೇ ವರ್ಷಗಳಲ್ಲಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡುವರು ಎಂಬುದಕ್ಕೆ ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆಯೇ ಸಾಕ್ಷಿಯಾಗಿದೆ ಎಂದರು.

ಹತ್ತು ವರ್ಷಗಳ ಹಿಂದೆ ನಮ್ಮ ಸಂಕಲ್ಪ ಮತ್ತು ಆಶಯದಂತೆ ಉಬ್ರಾಣಿ ಅಮೃತಾಪುರ ಏತ ನೀರಾವರಿಯು ಯೋಜನೆಯು130 ಕೋಟಿ ರೂಗಳ ವೆಚ್ಚದಲ್ಲಿ ಪೂರ್ಣಗೊಂಡ ತರುವಾಯ ಪ್ರತಿ ವರ್ಷವೂ ತುಮ್ಕೋಸ್ ಮತ್ತು ವಿವಿಧ ಅಡಕೆ ಮಂಡಿಗಳಿಂದ ನೂರಾರು ಕೋಟಿರೂಗಳು ತೆರಿಗೆ ರೂಪದಲ್ಲಿ ಕಳೆದ ಹತ್ತು ವರ್ಷಗಳಿಂದ ತೆರಿಗೆ ರೂಪದಲ್ಲಿ ಪಾವತಿಯಾಗಿದೆ ಎಂದು ತಿಳಿಸಿದರು.

ಸಾಮರಸ್ಯವೇ ಜೀವನ:

ಪ್ರತಿ ಸಂಸಾರದ ಸುಖದ ದಾರಿಯಲ್ಲಿ ಸಾಗಲು ಸಾಮರಸ್ಯ ಅಗತ್ಯ. ಅಲ್ಪ ತೃಪ್ತಿಗೆ ದಾಸರಾಗದೆ ಅಪನಂಬಿಕೆಯ ವಾದ-ವಿವಾದಕ್ಕೆ ಆಸ್ಪದ ಕಲ್ಪಿಸಿದೆ ಬಾಳಪಥದಲ್ಲಿ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಆಶಿಸಿದರು. ಪುರಂದರ ದಾಸರ ಕೀರ್ತನೆ ಉಲ್ಲೇಖಿಸಿದ ಶ್ರೀ ಜಗದ್ಗುರುಗಳು ನಿಂದಕರಿರಬೇಕು ಇರಬೇಕು ನಿಂದಕರಿರಬೇಕು,ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ,ಅಂದಂದು ಮಾಡಿದ ಪಾಪದ ಮಾಮಲ, ತಿಂದು ಹೋಗುವರಯ್ಯ ನಿಂದಕರು
ಈ ನಿಂದಕರು ಮನೆ ಮಠ ಸೇರಿದಂತೆ ಎಲ್ಲಾ ಕಡೆ ಇರುವರು ಎಂದು ತಿಳಿಸಿದರು

ತಲೆಮರೆಸಿಕೊಂಡ ಸ್ವಾರ್ಥಿಗಳು:

ನಮ್ಮ ಮತ್ತು ಮಠದ ಹೆಸರು ಉಪಯೋಗಿಸಿ ತಮ್ಮ ಖಾಸಗೀ ಸ್ವಾರ್ಥ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಗಮನಕ್ಕೆ ಬಂದ ಕೂಡಲೇ ಕೆಲ ಸಮಾಜ ದ್ರೋಹಿಗಳಿಗೆ ಅಪಾರ ಶಿಷ್ಯರ ಆಶಯದಂತೆ ಕ್ರಮ ಕೈಗೊಂಡ ಪರಿಣಾಮ ಆಧಾರ ರಹಿತ ಆರೋಪಗಳನ್ನು ಎದುರಿಸಬೇಕಾಯಿತು, ಸತ್ಯಾಸತ್ಯತೆಯ ಪರಿಶೀಲನೆಗೆ ಸಮಾಜದ ಸಾವಿರಾರು ಶಿಷ್ಯರ ಉಪಸ್ಥಿತಿಯಲ್ಲಿ ನಾಲ್ಕು ಸಭೆಗಳನ್ನು ನಡೆಸಲಾಯಿತು.ಈ ಸಭೆಗಳಿಗೆ ಬಂದು ತಮ್ಮ ಆರೋಪಗಳನ್ನು ಸಾಬೀತು ಪಡಿಸಲು ಅವಕಾಶ ನೀಡಿದರೂ ಸ್ವಾರ್ಥ ಸಾಧಕರು ಬರದೇ ತಲೆ ಮೆರೆಸಿಕೊಂಡು ಹೋಗಿದ್ದು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯವಾಗಿದೆ. ಈ ದುರುಳರು ಇನ್ನಾದರೂ ತಮ್ಮ ತಪ್ಪು ಅರಿತು ಮಾನವರಾಗಿ ಬಾಳುವಂತೆ ದೇವರು ಅನುಗ್ರಹಿಸಲಿ ಎಂದು ಆಶಿಸಿದರು.

ತರೀಕೆರೆ ತಾ.ಪಂ ಇ.ಓ.ಡಾ॥ದೇವೇಂದ್ರಪ್ಪ, ನರೇಗಾ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Related Articles

Leave a Reply

Your email address will not be published. Required fields are marked *