ಅಕ್ರಮ ಅಕ್ಕಿ ದಂಧೆಗೆ ಹಾಟ್-ಸ್ಪಾಟ್ ಆಯ್ತಾ ಜಿಲ್ಲೆ!
: ನಿರಂತರ ದಾಳಿಯಾದರೂ ನಿಲ್ಲದ ಅಕ್ಕಿ ದಂಧೆ; ಡಿಸಿ ಮಾಹಿತಿ ನೀಡಿದ್ರೂ ಎದ್ದೇಳದ ಅಧಿಕಾರಿಗಳು!
ಗದಗ: ಕಳೆದ ಹಲವು ದಿನಗಳಿಂದ ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅನ್ನಭಾಗ್ಯ ಅಕ್ಕಿ ಅಕ್ರಮ ದಂಧೆ ನಿಲ್ಲುವಂತೆ ಕಾಣುತ್ತಿಲ್ಲ. ಈ ಅಕ್ರಮ ಅಕ್ಕಿ ದಂಧೆಯ ಬಗ್ಗೆ ಸ್ವತಃ ಡಿಸಿ ಮೆಡಮ್ ಕಾರ್ಯಾಚರಣೆಗೆ ಇಳಿಯುತ್ತಿರುವುದು ಒಂದೆಡೆಯಾದರೆ. ತಾಲೂಕು ಮಟ್ಟದ ಅಧಿಕಾರಿಗಳು ಅಕ್ರಮ ದಂಧೆಗೆ ಬ್ರೇಕ್ ಹಾಕುವ ಬದಲು ಕರ್ತವ್ಯದಿಂದ ಹಿಂದೇಟು ಹಾಕುತ್ತಿರುವುದು ಅಧಿಕಾರಿಗಳ ನಡೆ ಸಂಶಯಾಸ್ಪದ ವಾಗಿದೆ.
ಬೆಟಗೇರಿಯ ಗುದಾಮವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅನ್ನಭಾಗ್ಯ ಅಕ್ಕಿಯನ್ನು ಲಾರಿಯಲ್ಲಿ ಹೇರಿ ರೋಣ ಮಾರ್ಗವಾಗಿ ಹೊರಟಿದ್ದಾಗ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಬೆಟಗೇರಿಯ ಖಾಸಗಿ ಪೆಟ್ರೋಲ್ ಬಂಕ್ ಎದುರಿಗೆ ಈ ಘಟನೆ ಅ.10ರಂದು ರಾತ್ರಿ ನಡೆದಿದ್ದು, ಮೂರು ದಿನಗಳ ನಂತರ ಬೆಟಗೇರಿ ಠಾಣೆಯಲ್ಲಿ ದೂರು ಕೊಡಲಾಗಿದೆ. ಲಾರಿ ಮಾಲೀಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಲಾರಿ ಮಾಲೀಕ ಬಳ್ಳಾರಿಯ ಮಂಜಪ್ಪ ರಂಗಯ್ಯ ದೇವಲಾಪೂರ ಹಾಗೂ ಚಾಲಕ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನಾಗರಾಜ್ ರಂಗಯ್ಯ ದೇವಲಾಪೂರ ಎಂಬ ಇಬ್ಬರು ಮೇಲೆ ಪ್ರಕರಣ ದಾಖಲಾಗಿದೆ.
ಆಹಾರ ಇಲಾಖೆ ಅಧಿಕಾರಿ ನಾಗನಗೌಡ ರುದ್ರಗೌಡ ಚಿನ್ನಪ್ಪಗೌಡರ್ ಎಂಬುವವರು ದೂರು ನೀಡಿದ್ದಾರೆ.
ಅಂದಾಜು ನಾಲ್ಕು ಲಕ್ಷ ರೂ. ಮೌಲ್ಯದ 186ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
ಈ ಅಕ್ರಮ ಅಕ್ಕಿ ದಂಧೆಗೆ ಕಳಸಾ-ಬಂಡೂರಿ ಹೋರಾಟ ಸಮಿತಿಯ ಮುಖಂಡನೊಬ್ಬ ಬೆನ್ನೆಲುಬು ಆಗಿ ನಿಂತಿದ್ದು, ಇಡೀ ಡಿಪಾರ್ಟ್ಮೆಂಟ್ ಇವನು ಹೇಳಿದಂತೆ ಕೇಳುತ್ತದೆ ಎನ್ನುವ ಗುಲ್ಲು ಗದಗ-ಬೆಟಗೇರಿ ಭಾಗದಲ್ಲಿ ಕೇಳಿಬರುತ್ತದೆ. ಯಾರಾದರೂ ಪ್ರಶ್ನೆ ಮಾಡಿದರೆ ವ್ಯವಸ್ಥಿತ ಛೆಲಾಗಳ ಮೂಲಕ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತದೆ ಅಂತೆ. ಇಂತಹ ಬೆದರಿಕೆಯಿಂದ ಎಷ್ಟೋ ಜನ ಪೊಲೀಸರ ಬಳಿ ಹೋಗಿರುವ ಉದಾಹರಣೆಗಳು ಕೂಡ ಇವೆ ಎನ್ನಲಾಗಿದೆ. ಆದರೆ ಅಕ್ಕಿ ದಂಧೆ-ಬೆದರಿಕೆ ತಂತ್ರ ಎರಡೂ ಅವಳಿ ನಗರದಲ್ಲಿ ನಿಲ್ಲುತ್ತಿಲ್ಲ ಎಂಬುದಂತೂ ಪದೇ ಪದೇ ಸಾಬೀತು ಆಗುತ್ತಲೆ ಇದೆ.