ನಕಲಿ ವೋಟರ್ ಐಡಿ ಮಾಡುತ್ತಿದ್ದವನ ಬಂಧನ
ಧಾರವಾಡ
ಚುನಾವಣಾ ಆಯೋಗದ ವೆಬ್ಸೈಟ್ ಬಳಸಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್ನಲ್ಲಿರುವ ಎಂಜೆಆರ್ ಝರಾಕ್ಸ್ ಸೆಂಟರ್ನ ಮಹ್ಮದ್ಅಲಿ ಎಂಬಾತನೇ ಬಂಧಿತ ಆರೋಪಿ. ಈತ ಚುನಾವಣಾ ಆಯೋಗದ ವೆಬ್ಸೈಟ್ ಬಳಕೆ ಮಾಡಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ.
ಈ ರೀತಿಯ ವೋಟರ್ ಐಡಿ ಪಡೆದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯೊಂದನ್ನು ಸಲ್ಲಿಸಲು ಬಂದಾಗ ಅದು ತಹಶೀಲ್ದಾರ ಕಚೇರಿಯಿಂದ ಪೂರೈಕೆ ಮಾಡಲಾದ ಅಧಿಕೃತ ವೋಟರ್ ಐಡಿ ಅಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಸ್ವತಃ ತಹಶೀಲ್ದಾರ ಸಂತೋಷ ಹಿರೇಮಠ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಇಂದು ಮಹ್ಮದ್ಅಲಿ ಅವರ ಝರಾಕ್ಸ್ ಅಂಗಡಿಗೆ ಭೇಟಿ ನೀಡಿದ ತಹಶೀಲ್ದಾರ ಸಂತೋಷ ಹಿರೇಮಠ ಹಾಗೂ ಸೈಬರ್ ಕ್ರೈಂ ಠಾಣೆಯ ಪೊಲೀಸರು ಅಂಗಡಿಯಲ್ಲಿ ಪರಿಶೀಲನೆ ನಡೆಸಿ, ಅಲ್ಲಿದ್ದ ಪ್ರಿಂಟರ್ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.