ಗರಗ ಕಲ್ಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ
ಧಾರವಾಡ: ಧಾರವಾಡ ತಾಲೂಕಿನ ಐತಿಹಾಸಿಕ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿ ಭಾನುವಾರ ಬೆಳಗಿನಜಾವ ಲಿಂಗೈಕ್ಯರಾಗಿದ್ದಾರೆ.
ಸ್ವಾಮೀಜಿಗಳಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಮಠದ ಅಭಿವೃದ್ಧಿ ಬಗ್ಗೆ ಶಾಸಕ ಅಮೃತ ದೇಸಾಯಿ ಅವರೊಂದಿಗೆ ಸದಾಕಾಲ ಚರ್ಚಿಸಿಸುತ್ತಿದ್ದರು ಸ್ವಾಮೀಜಿ.
ಅಲ್ಲದೇ ಆರೋಗ್ಯದ ದೃಷ್ಟಿಯಿಂದ ಶಾಸಕರು ಕೂಡ ಸ್ವಾಮೀಜಿ ಬಗ್ಗೆ ಕಳಕಳಿ ಹೊಂದಿದ್ದರು.
ಪೂಜ್ಯರ ಅಂತ್ಯಕ್ರಿಯೆ ನಾಳೆ ಸೋಮವಾರ ಬೆಳಿಗ್ಗೆ 12 ಗಂಟೆಗೆ ಗರಗ ಗ್ರಾಮದ ಶ್ರೀಮಠದ ಆವರಣದಲ್ಲಿ ನಡೆಯಲಿದೆ. ಈ ಅಂತ್ಯಕ್ರಿಯೆಗೆ ನಾಡಿನ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.
ಇತ್ತೀಚಿಗಷ್ಟೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಹಾಗೂ ಕಾಂಗ್ರೆಸ್ ಮುಖಂಡೆ ಶಿವಲೀಲಾ ಕುಲಕರ್ಣಿ ಅವರು ಶ್ರೀಗಳ ಆರೋಗ್ಯ ವಿಚಾರಿಸಿ ಶೀಘ್ರವೇ ಗುಣಮುಖರಾಗುವಂತೆ ಚರ್ಚಿಸಿದ್ರು.
ಕಲ್ಮಠದ ಜವಾಬ್ದಾರಿ ಹೊತ್ತುಕೊಂಡಿದ್ದ ಚನ್ನಬಸವ ಸ್ವಾಮೀಜಿಗಳು ಮಠದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದರು. ಅಲ್ಲದೇ ಅನ್ನದಾನ ಹಾಗೂ ವಿದ್ಯಾದಾನಕ್ಕೆ ಒತ್ತುಕೊಟ್ಟು ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿದ್ದರು. ಶ್ರೀಗಳ ಅಗಲಿಕೆಯಿಂದ ಗರಗ-ಹಂಗರಕಿ ಸೇರಿದಂತೆ ಇಡೀ ಧಾರವಾಡ ಜಿಲ್ಲೆಯ ಭಕ್ತಗಣ ಶೋಕಸಾಗರದಲ್ಲಿ ಮುಳುಗುವಂತಾಗಿದೆ.
ಸಾವರ್ಜನಿಕ ದರ್ಶನಕ್ಕೆ ಸಿದ್ಧತೆ
ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಹಾಗೂ ಶ್ರೀಮಠದ ಕಾರ್ಯಾಧ್ಯಕ್ಷರಾದ ಅಶೋಕ ದೇಸಾಯಿ, ಹಿರಿಯ ಭಕ್ತರಾದ ದಯಾನಂದ ಪಾಟೀಲ ಮತ್ತು ಗರಗ-ಹಂಗರಕಿ ಗ್ರಾಮದ ಸದ್ಭಕ್ತರ ನೇತ್ರತ್ವದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇಂದು ಮಧ್ಯಾಹ್ನ 12.30 ರಿಂದ ನಾಳೆ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಎಲ್ಲ ಭಕ್ತರಿಗೆ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಾಳೆ ಬೃಹತ್ ಮೆರವಣಿಗೆ
ನಾಳೆ ಸೋಮವಾರ ಬೆಳಗ್ಗೆ 7.30ಕ್ಕೆ ಶ್ರೀಗಳ ಅಂತಿಮಯಾತ್ರೆಯ ಮೆರವಣಿಗೆ ಹಂಗರಕಿ ಗ್ರಾಮದಿಂದ ಹೊರಟು, ಗರಗ ಗ್ರಾಮದಲ್ಲಿ ಸಂಚರಿಸಲಿದೆ. ನಂತರ ಶ್ರೀಮಠದ ಆವರಣದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ. ಗರಗ-ಹಂಗರಕಿ ಗ್ರಾಮದ ಸದ್ಭಕ್ತರು ಗುರು-ಹಿರಿಯರು ಹಾಗೂ ಮಠಾಧೀಶರು ಶ್ರೀಗಳ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯ ಉಸ್ತುವಾರಿ ವಹಿಸಿದ್ದಾರೆ.