ಕಲ್ಲು ಕ್ವಾರಿ ಹೊಂಡಕ್ಕೆ ಬಿದ್ದು ಯುವಕ ಸಾವು
ಚಿಕ್ಕಬಳ್ಳಾಪುರ: ಪ್ರಸಿದ್ದ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡಲು ಚಿಕ್ಕಬಳ್ಳಾಪುರಕ್ಕೆ ಬಂದ ಬೆಂಗಳೂರಿನ ಯುವಕನೋರ್ವ ದಾರಿ ಮಧ್ಯೆ ಕಲ್ಲು ಕ್ವಾರಿ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಯುವಕಲ ನೀರಿನಲ್ಲಿ ಮುಳುಗುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಘಟನೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಕೌರನಹಳ್ಳಿ ಬಳಿ ನಡೆದಿದೆ. ಯುವಕನಿಗೆ ಈಜು ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಮನೋಜ್ ಕುಮಾರ್ ಎಂಬ ಯುವಕ ಸ್ನೇಹಿತರ ಜೊತೆ ನೀರಿಗೆ ಇಳಿದಿದ್ದಾನೆ. ಆದರೆ ಮನೋಜ್ ಮಾತ್ರ ವಾಪಸ್ ಮೇಲೆ ಬರಲಿಲ್ಲ. ಜೊತೆಗಿದ್ದ ಸ್ನೇಹಿತರು ಪ್ರಯತ್ನ ಮಾಡಿದರೂ ಮನೋನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ, ಕಲ್ಲು ಕ್ವಾರಿ ನೀರಿನ ಹೊಂಡಲ್ಲಿ ಮುಳುಗಿದ್ದ ಮನೋಜ್ ಶವವನ್ನು ಮೇಲೆ ಎತ್ತಿದ್ದಾರೆ. “ಇಶಾ ಫೌಂಡೇಶನ್ನ ಆದಿಯೋಗಿ ಪ್ರತಿಮೆ ನೋಡಿ ವಾಪಸ್ ಆಗುತ್ತಿದ್ದ ಯುವಕನೊಬ್ಬ ಕಲ್ಲು ಕ್ವಾರಿ ಹೊಂಡದಲ್ಲಿನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ದೂರವಾಣಿ ಕರೆಯೊಂದು ಬಂದಿದೆ. ಕೂಡಲೇ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದೇವೆ. ಮೃತ ಯುವಕ 10ನೇ ತರಗತಿಯವನಾಗಿದ್ದಾನೆ” ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ್ ಹೇಳಿದ್ದಾರೆ.