ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಜಿಲ್ಲೆಯಲ್ಲಿ ಇಂದು ವಿಶ್ವ “ಭೂಮಿ” ದಿನಾಚರಣೆ!

ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣಕ್ಕೆ ಕೈ ಜೋಡಿಸಲು ಕರೆ!
ಜಿಲ್ಲಾ ನ್ಯಾಯಾಧೀಶರು ಹಾಗೂ ಪ್ರಧಾನ ಕಾರ್ಮಿಕ ನ್ಯಾಯಾಲಯ ಅಧ್ಯಕ್ಷಾಧಿಕಾರಿ ಮಾರುತಿ ಬಗಾಡೆ!

ಹುಬ್ಬಳ್ಳಿ(ಕರ್ನಾಟಕ ವಾರ್ತೆ):

ಭೂಮಿಯ ವಾತಾವರಣವನ್ನು ಕಾಪಾಡುವುದು ಎಲ್ಲರ ಹೊಣೆಯಾಗಿದೆ‌. ಸಾಮೂಹಿಕ ಸಂಕಲ್ಪ ಮತ್ತು ಸಹಯೋಗದಿಂದ ಭೂಮಿ ದಿನವನ್ನು ಆಚರಿಸಬೇಕು. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹಾಗೂ ಪ್ರಧಾನ ಕಾರ್ಮಿಕ ನ್ಯಾಯಾಲಯ ಅಧ್ಯಕ್ಷಾಧಿಕಾರಿ ಮಾರುತಿ ಬಗಾಡೆ ಹೇಳಿದರು.

ಹುಬ್ಬಳ್ಳಿಯ ನೂತನ ನ್ಯಾಯಾಲಯಗಳ ಆವರಣದಲ್ಲಿಂದು ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಭೂಮಿ ದಿನದ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಮಾತನಾಡಿದರು‌.

ಭೂಮಿಯ ಮೇಲೆ ಅರಣ್ಯ ಸಂಪತ್ತು ಹೆಚ್ವಿಸಬೇಕಿದೆ. ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ವಾತಾವರಣದ ಸಮತೋಲನ ಕಾಪಾಡಲು ಎಲ್ಲರೂ ಪಣತೊಡಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸಿ.ಆರ್.ಪಾಟೀಲ ಮಾತನಾಡಿ, ಈಗಾಗಲೇ ಭೂಮಿಯ ಮೇಲೆ ಸಾಕಷ್ಟು ಹಾನಿಕಾರಕ ಕೃತ್ಯಗಳನ್ನು ಮಾಡಲಾಗಿದೆ. ಮೂರನೇ ಮಹಾಯುದ್ಧದ ಅಂಚಿನಲ್ಲಿ ನಾವು ಇದ್ದೇವೆ. ಯುದ್ಧದಿಂದಾಗಿ ಸಾಮಾನ್ಯ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಪ್ರಕೃತಿ ಕಾಪಾಡಲು ಎಲ್ಲರೂ ಮುಂದಾಗಬೇಕು. ಭೂಮಿಯ ಸಮತೋಲನ ಕಾಪಾಡಬೇಕು‌.ಓಜೋನ್ ಪದರ ರಕ್ಷಿಸಬೇಕು.ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಬಾರದು. ವನ್ಯಜೀವಿ, ಅರಣ್ಯ ಸಂಪತ್ತು ಹೆಚ್ಚಿಸುವ ಮೂಲಕ ಭೂಮಿಯ ರಕ್ಷಣೆ ಮಾಡಬೇಕು ಎಂದರು.

ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಆರ್.ಎಸ್.ಚಿನ್ನಣ್ಣವರ ಮಾತನಾಡಿ, ಭೂಮಿಯಲ್ಲಿ ಹೂಡಿಕೆ ಮಾಡಿ (ಇನ್ವೇಸ್ಟ್ ಇನ್ ದಿ ಪ್ಲಾನೆಟ್) ಧೇಯವಾಕ್ಯದೊಂದಿಗೆ ಈ ಸಲದ ಭೂ ದಿನವನ್ನು ಆಚರಿಸಲಾಗುತ್ತಿದೆ. ಭೂಮಿಯ ಸಂರಕ್ಷಣೆಗೆ ಸಾಕಷ್ಟು ಮರಗಳನ್ನು ನೆಡಬೇಕು‌. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕು. ಮನುಷ್ಯನ ಆರೋಗ್ಯದ ರೀತಿಯಲ್ಲಿ ನಿಸರ್ಗವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಮಿಗೆ ಹಾನಿ ಉಂಟು ಮಾಡುವ ಕೆಲಸಗಳನ್ನು ಮಾಡಬಾರದು. ಭೂಮಿಯನ್ನು ಕಾಪಾಡಲು ಎಲ್ಲರೂ ಶಪಥ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ,ವಾರ್ತಾ ಇಲಾಖೆ ಅಧೀಕ್ಷಕ ವಿನೋದಕುಮಾರ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ನಿರೂಪಿಸಿ, ವಂದಿಸಿದರು.

Related Articles

Leave a Reply

Your email address will not be published. Required fields are marked *